ಶಿರಾ: ಬೇಸಿಗೆಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಈ ನಡುವೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ (Sira News) ದೊಡ್ಡಗೂಳ ಗ್ರಾಮದ ಕೆರೆಯಲ್ಲಿ ಬಿಸಿಲ ಬೇಗೆ ಮೀನುಗಳಿಗೂ ತಟ್ಟಿದೆ. ಮಳೆಯಾಗದ ಹಿನ್ನೆಲೆ ಕೆರೆಯ ನೀರು ಬತ್ತಿದ್ದರಿಂದ ಸಾವಿರಾರು ಮೀನುಗಳು ಮೃತಪಟ್ಟಿರುವ ಘಟನೆ ನಡೆದಿದೆ. ಜನವರಿಯಿಂದ ಬಿಸಿಲಿನ ತಾಪಮಾನ ಹೆಚ್ಚಾಗಿದ್ದರಿಂದ ಕೆರೆಯಲ್ಲಿನ ನೀರು ಬತ್ತಿದ ಪರಿಣಾಮ ಮೀನುಗಳು ಸಾವನ್ನಪ್ಪಿವೆ.
ಮಳೆ ಕೊರತೆಯಿಂದ ಕೆರೆಕಟ್ಟೆಗಳು ಸಂಪೂರ್ಣವಾಗಿ ಖಾಲಿಯಾಗಿವೆ. ಕೆರೆಯ ಗುಂಡಿಗಳಲ್ಲಿ ಇದ್ದ ಅಲ್ಪಸ್ವಲ್ಪ ನೀರಿನಲ್ಲಿ ಮೀನುಗಳು ಜೀವ ಉಳಿಸಿಕೊಂಡಿದ್ದವು. ಅದರೆ ಇತ್ತೀಚೆಗೆ ಬಿಸಿಲಿನ ತಾಪಮಾನ ಹೆಚ್ಚಾದ ಹಿನ್ನೆಲೆಯಲ್ಲಿ ಕೆರೆಯಲ್ಲಿನ ನೀರು ಸಂಪೂರ್ಣವಾಗಿ ಬತ್ತಿದೆ. ಹೀಗಾಗಿ ಕೆರೆಯಲ್ಲಿದ್ದ ಮೀನುಗಳು ವಿಲವಿಲ ಒದ್ದಾಡಿ ಪ್ರಾಣಬಿಟ್ಟಿವೆ.
ಕೆರೆಯಲ್ಲಿ ನೀರು ಕಡಿಮೆಯಾಗಿ, ಇರುವ ನೀರು ಕಲುಷಿತಗೊಂಡು ಮೀನುಗಳು ಸತ್ತಿವೆ. ಒಂದು ವಾರದಿಂದ ಮೀನುಗಳು ಸಾಯುತ್ತಿದ್ದರೂ ಯಾರೂ ಭೇಟಿ ನೀಡಿ ಪರಿಶೀಲಿಸುವ, ಸತ್ತ ಮೀನು ತೆರವುಗೊಳಿಸುವ ಕಾರ್ಯ ಮಾಡಿರಲಿಲ್ಲ. ಇದರಿಂದ ದುರ್ವಾಸನೆ ಉಂಟಾಗಿದೆ ಎಂದು ಗ್ರಾಮಸ್ಥರು ದೂರು ನೀಡಿದ್ದರು. ಹೀಗಾಗಿ ರತ್ನಸಂದ್ರ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ, ಸತ್ತ ಮೀನುಗಳನ್ನು ಜೆಸಿಬಿ ಬಳಸಿ ತೆರವು ಮಾಡಿಸಿದರು.
ಇದನ್ನೂ ಓದಿ | Car Accident: ಮಾದಾವರ ಟೋಲ್‌ಗೇಟ್ ಬಳಿ ಕಾರು ಅಪಘಾತ ಪ್ರಕರಣ; ಗಾಯಗೊಂಡಿದ್ದ ಮೂವರು ಚಿಕಿತ್ಸೆ ಫಲಿಸದೆ ಸಾವು
Arecanut Cultivation: ಒಣಗುತ್ತಿರುವುದು ಅಡಿಕೆ ಮರಗಳಲ್ಲ, ರೈತರ ಬದುಕು!
ಚಳ್ಳಕೆರೆ: ಬರಗಾಲಕ್ಕೆ ತುತ್ತಾದ ಚಳ್ಳಕೆರೆ ತಾಲೂಕಿನ ರೈತರಿಗೆ ಅನಿವಾರ್ಯವಾದದ್ದೇ ಅಡಿಕೆ ಬೆಳೆ (Arecanut Cultivation). ಸಾವಿರಾರು ಹೆಕ್ಟೇರ್ನಲ್ಲಿ ಅಡಿಕೆ ಬೆಳೆದು ಬದುಕು ಸಾಗಿಸಲು ಕನಸು ಕಂಡಿದ್ದ ಬೆಳೆಗಾರರ ಬದುಕೀಗ ಬಿಸಿಲ ಬೇಗೆಗೆ ಸುಟ್ಟು ಕರಕಲಾಗಿದೆ. ಹಚ್ಚ- ಹಸಿರಿನಿಂದ ರಾರಾಜಿಸುತ್ತಿದ್ದ ಅಡಿಕೆ ಮರಗಳು ನೀರಿಲ್ಲದೇ ಒಣಗಿ ನಿಲ್ಲುತ್ತಿವೆ. ಬೋರ್ವೆಲ್ನಲ್ಲಿ ನೀರು ನಿಲ್ಲುತ್ತಿದ್ದಂತೆ ಮರಗಳು ಸುಡಲು ಆರಂಭಿಸಿವೆ. ಒಣಗುತ್ತಿರುವುದು ಮರಗಳಲ್ಲ. ನಮ್ಮ ಬದುಕು ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.
ಅತ್ತ ಮಳೆ ಇಲ್ಲ. ಇತ್ತ ನೆಲದಲ್ಲಿ ನೀರಿಲ್ಲ. ಎಷ್ಟು ಬೋರ್ ಕೊರೆಯಿಸಿದರು. ನೀರು ಬರುತ್ತಿಲ್ಲ.
ಇನ್ನು ಒಂದು ತಿಂಗಳ ಕಾಲ ಭೂಮಿಗೆ ಮಳೆ ಬಾರದಿದ್ದರೆ ಅದೆಷ್ಟೋ ಅಡಿಕೆ ತೋಟಗಳು ಒಣಗಿ ಹೋಗುತ್ತವೆ ಎನ್ನುತ್ತಾರೆ ರೈತ ತಿಪ್ಪೇಸ್ವಾಮಿ.
ತಾಲೂಕಿನ ಕಾಪರಹಳ್ಳಿ ಗ್ರಾಮದ ಗುರುಸ್ವಾಮಿ ರೈತ ತಮ್ಮ ಜಮೀನಿನಲ್ಲಿ ಅಡಿಕೆ ಬೆಳೆಯನ್ನು ಬೆಳೆದಿದ್ದು, ಈಗ ಕೊಳವೆ ಬಾವಿಯಲ್ಲಿ ನೀರಿಲ್ಲದೆ ಅಡಿಕೆ ಬೆಳೆ ಸಂಪೂರ್ಣ ಒಣಗುತ್ತಿದೆ.