ಶಿರಾ: ಪರೀಕ್ಷೆಯಲ್ಲಿ (SSLC Result 2024) ಹೆಚ್ಚು ಅಂಕ ಪಡೆದು ಶಾಲೆಗೆ ಮತ್ತು ಪಾಲಕರಿಗೆ ಕೀರ್ತಿ ತರುವುದು ಹೆಮ್ಮೆಯ ಸಂಗತಿ. ಜತೆಗೆ ವಿದ್ಯಾರ್ಥಿಗಳ ಯಶಸ್ಸಿಗೆ ಶ್ರಮಿಸಿದ ಶಿಕ್ಷಕ ವೃಂದ ಹಾಗೂ ಪಾಲಕರ ಕಾರ್ಯವೂ ಶ್ಲಾಘನೀಯವಾದುದು ಎಂದು ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಶಿರಾ ತಾಲೂಕು ಘಟಕದ ಅಧ್ಯಕ್ಷ ದೊಡ್ಡ ಸಿದ್ದಪ್ಪ ತಿಳಿಸಿದರು.
ನಗರದ ಶ್ರೀ ವಾಸವಿ ವಿದ್ಯಾಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಹರ್ಷಿತ ಡಿ.ಎಂ. ರಾಜ್ಯಕ್ಕೆ ಎರಡನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಹರ್ಷಿತ ಡಿ.ಎಂ. ಅವರನ್ನು ಸನ್ಮಾನಿಸಿ, ಬಳಿಕ ಅವರು ಮಾತನಾಡಿದರು.
ದೃಢ ನಿರ್ಧಾರ ಮತ್ತು ಅಚಲವಾದ ನಂಬಿಕೆ ಯಶಸ್ಸಿನ ಮೆಟ್ಟಿಲುಗಳಾಗಿವೆ. ಜೀವನದಲ್ಲಿ ದೃಢ ನಿರ್ಧಾರ ತಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.
ಇದನ್ನೂ ಓದಿ: Selco India: ಸೌರವಿದ್ಯುತ್ ಪ್ರವರ್ತಕ ರಿಚರ್ಡ್ ಹ್ಯಾನ್ಸೆನ್‌ಗೆ ಸೆಲ್ಕೋದ ಪ್ರತಿಷ್ಠಿತ ʼಸೂರ್ಯಮಿತ್ರʼ ಪ್ರಶಸ್ತಿ
ಶ್ರೀ ವಾಸವಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಮೇಶ್ ಬಾಬು ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿನಿ ಹರ್ಷಿತ ಡಿ.ಎಂ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯಕ್ಕೆ 2ನೇ ಸ್ಥಾನ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ. ಜತೆಗೆ ಶಾಲೆಗೆ ಉತ್ತಮ ಫಲಿತಾಂಶ ಬಂದಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಶಿಕ್ಷಕರು ಪ್ರಸಕ್ತ ವರ್ಷದಲ್ಲಿಯೂ ಉತ್ತಮ ಫಲಿತಾಂಶ ನೀಡುವ ಭರವಸೆ ನೀಡಿದ್ದಾರೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: ICMR Dietary Guidelines: ನಿಮ್ಮ ಆರೋಗ್ಯ ಚೆನ್ನಾಗಿರಬೇಕೆ? ತಜ್ಞ ಸಮಿತಿಯ ಈ ಆಹಾರ ಸಲಹೆ ಪಾಲಿಸಿ
ಈ ಸಂದರ್ಭದಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಶಿರಾ ತಾಲೂಕು ಕಾರ್ಯದರ್ಶಿ ಕೋಟೆ ಚಂದ್ರಶೇಖರ್, ಖಜಾಂಚಿ ಮಂಜುಶ್ರೀ ಮಹಾಲಿಂಗಪ್ಪ, ವಾಸವಿ ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಸುರೇಶ್ ಬಾಬು, ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಖಜಾಂಚಿ ಚಂದ್ರಶೇಖರ್ ಬಾಬು, ನಿರ್ದೇಶಕರುಗಳಾದ ರಚಿತಾ ನಾಗಾರ್ಜುನ್, ಶ್ರೀಕಾಂತ್, ರಾಧಾಕೃಷ್ಣ, ವಿಜಯ್, ಜಗದೀಶ್, ಯಶೋದ ಸುರೇಶ್, ನಾಗಲಕ್ಷ್ಮಿ, ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಜಯನಾರಾಯಣ, ಮಂಜುನಾಥ್ ಸೇರಿದಂತೆ ಶಾಲೆಯ ವಿದ್ಯಾರ್ಥಿಗಳ ಪೋಷಕರು, ಸಿಬ್ಬಂದಿ ಹಾಗೂ ಇತರರು ಉಪಸ್ಥಿತರಿದ್ದರು.