ಶಿರಾ: ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಶಾಖದಡು ಗ್ರಾಮದಲ್ಲಿ ಅಕ್ರಮ ಮದ್ಯ (Illegal Liquor) ಮಾರಾಟ ಹಾವಳಿ ಹೆಚ್ಚಾಗಿದ್ದು, ಕೂಡಲೇ ಅಕ್ರಮ ಮದ್ಯ ಮಾರಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮದ ಮಹಿಳೆಯರು, ಶಾಸಕರು ಮತ್ತು ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾರ್ವಜನಿಕರ ಕುಂದು-ಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ. ಸುರೇಶ್ ಬಾಬು ಅವರಿಗೆ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಮಹಿಳೆಯರು ಒತ್ತಾಯಿಸಿದರು.
ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಶಾಖದಡು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟದ ಹಾವಳಿ ಮಿತಿ ಮೀರಿದ್ದು, ಅದನ್ನು ತಡೆಯುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: Shivamogga News: ಸೋಲಾರ್ ಆಧಾರಿತ ಹುಲ್ಲು ಕಟಾವು ಯಂತ್ರ ಕಂಡುಹಿಡಿದ ಸರ್ಕಾರಿ ಶಾಲಾ ವಿದ್ಯಾರ್ಥಿ
ಗ್ರಾಮದಲ್ಲಿ ಕೂಲಿ ಮಾಡುವ ಜನರೇ ಹೆಚ್ಚಾಗಿದ್ದು ನಿತ್ಯ ದುಡಿಮೆಯಿಂದ ಬರುವ ಹಣವನ್ನು ಮದ್ಯಕ್ಕೆ ಖರ್ಚು ಮಾಡುವುದಲ್ಲದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಜತೆಗೆ ಅಕ್ರಮ ಮದ್ಯ ಮಾರಾಟದಿಂದಾಗಿ ಯುವಕರು ಹೆಚ್ಚಾಗಿ ಮದ್ಯವ್ಯಸನಿಗಳಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಕೂಡಲೇ ಅಕ್ರಮ ಮದ್ಯ ಮಾರಾಟ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮದ ಮಹಿಳೆಯರು ಶಾಸಕರಿಗೆ ಒತ್ತಾಯಿಸಿದರು.
ಈ ವೇಳೆ ಶಾಸಕ ಸಿ.ಬಿ.ಸುರೇಶ್ ಬಾಬು, ದೂರವಾಣಿ ಮೂಲಕ ತಾವರೆಕೆರೆ ಪೊಲೀಸ್ ಠಾಣೆಗೆ ಮತ್ತು ಸ್ಥಳೀಯ ಅಬಕಾರಿ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಅಕ್ರಮ ಮದ್ಯ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಇದನ್ನೂ ಓದಿ: Benefits Of Jowar: ಚಳಿಗಾಲದಲ್ಲಿ ಜೋಳ ತಿಂದರೆ ಆರೋಗ್ಯಕ್ಕೆ ಒಳ್ಳೆಯದು
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.