ಚಿಕ್ಕನಾಯಕನಹಳ್ಳಿ: ಕೊಬ್ಬರಿ (Coconut) ಖರೀದಿ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ, ತಾಲೂಕಿನ ತೆಂಗು ಬೆಳೆಗಾರರು ಶುಕ್ರವಾರ ಪಟ್ಟಣದ (Tumkur News) ಎಪಿಎಂಸಿ ಕೊಬ್ಬರಿ ಖರೀದಿ ಕೇಂದ್ರದ ಬಳಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಿದರು.
ಪಟ್ಟಣದ ಎಪಿಎಂಸಿ ಕಚೇರಿ ಬಳಿ ಆಗಮಿಸಿದ ತೆಂಗು ಬೆಳೆಗಾರರು, ಅಧಿಕಾರಿಗಳು ಕೊಬ್ಬರಿ ಖರೀದಿಸುತ್ತೇವೆಂದು ಟೋಕನ್ ವಿತರಿಸಿ, ರೈತರಿಗೆ ಯಾವುದೇ ಮಾಹಿತಿ ನೀಡದೆ ದಿಢೀರನೆ ಖರೀದಿ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: Pizza Day: ಜನಪ್ರಿಯ ಪಿಜ್ಜಾದ ಇತಿಹಾಸ ಇಂದು ನಿನ್ನೆಯದಲ್ಲ!
ರೈತ ಮುಖಂಡ ಆಲದಕಟ್ಟೆ ತಿಮ್ಮಣ್ಣ ಮಾತನಾಡಿ, ಕೊಬ್ಬರಿ ಬೆಲೆ ಕುಸಿತದ ಪರಿಣಾಮ ಸರ್ಕಾರ ನೆಫೆಡ್ ಮೂಲಕ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 13,500 ರೂ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ. ಸೂಕ್ತ ಪ್ರಚಾರದ ಕೊರತೆಯಿಂದ ರೈತರು ಸಕಾಲದಲ್ಲಿ ನೊಂದಣಿಯನ್ನು ಮಾಡಿಸಿಲ್ಲ. ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಬೆಳೆ ಬೆಳೆದಿದ್ದಾರೆ. ಕಳೆದ ಮರ‍್ನಾಲ್ಕು ದಿನಗಳ ಹಿಂದೆ ಖರೀದಿ ಕೇಂದ್ರ ಆರಂಭಿಸಿರುವ ಇಲಾಖೆ ರೈತರಿಂದ ಕೊಬ್ಬರಿಯನ್ನು ಖರೀದಿಸದೆ ವರ್ತಕರಿಂದ ಕೊಬ್ಬರಿ ಖರೀದಿಸಿದ್ದಾರೆ ಎಂದು ದೂರಿದರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಗ್ರೇಡ್-2 ತಹಸೀಲ್ದಾರ್ ಕೀರ್ತಿ ಮಾತನಾಡಿ, ಈ ಕುರಿತು ತಹಸೀಲ್ದಾರ್ ಅವರೊಂದಿಗೆ ಮಾತನಾಡಬೇಕಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: Hassan News: ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಮುದ್ದೇನಹಳ್ಳಿ ಮರುಳಸಿದ್ದೇಶ್, ಗಾಣದಾಳ್, ರಮೇಶ್, ಅರಳೀಕೆರೆ ಶರತ್, ಆಣೆಕಟ್ಟೆ ಪ್ರವೀಣ್ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.