ಗುಬ್ಬಿ: ತಾಲೂಕಿನ ನಿಟ್ಟೂರು ಶ್ರೀ ಗುಹೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಹಾಗೂ ಎಸ್‌ಬಿಐ ಸಹಯೋಗದಲ್ಲಿ ಮಹಿಳೆಯರಿಗೆ ಉಚಿತ ಟೈಲರಿಂಗ್ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಜಿಲ್ಲಾ ನಿರ್ದೇಶಕಿ ದಯಾಶೀಲ ಮಾತನಾಡಿ, ನಮ್ಮ ಆರ್ಥಿಕತೆಯ ದೃಷ್ಟಿಯಿಂದ ಮನೆಯ ಅಭಿವೃದ್ಧಿಗಾಗಿ ಪ್ರತಿಯೊಬ್ಬರೂ ಸಹ ದುಡಿಯುವಂತಹ ಅವಶ್ಯಕತೆ ಇದೆ.
ಮಹಿಳೆಯರು ಸಹ ತಮ್ಮ ಸ್ವ ಉದ್ಯೋಗವನ್ನು ಮಾಡುವ ಮೂಲಕ ಮನೆಯ ನಿರ್ವಹಣೆ ಮಾಡಲು ಹೆಚ್ಚು ಅನುಕೂಲಕರವಾಗಿದ್ದು, ಇಲ್ಲಿ ತಾವು ಟೈಲರಿಂಗನ್ನು ಕಲಿತು ಬದುಕು ಕಟ್ಟಿಕೊಳ್ಳಲು ಹೆಚ್ಚು ಅವಕಾಶವಿದೆ ಎಂದು ತಿಳಿಸಿದರು.
ಇದನ್ನೂ ಓದಿ: Terracotta Figurines : ದಕ್ಷಿಣ ಕನ್ನಡದಲ್ಲಿ ಸಿಕ್ಕಿವೆ ಕ್ರಿ.ಪೂ 700ರ ಟೆರಾಕೋಟಾ ಪುಟ್ಟ ಬೊಂಬೆಗಳು!
ತರಬೇತಿಯಲ್ಲಿ ಶ್ರದ್ಧೆಯಿಂದ ಆಸಕ್ತಿಯಿಂದ ತಾವು ಕಲಿತಾಗ ಮುಂದಿನ ದಿನದಲ್ಲಿ ಭವಿಷ್ಯವನ್ನು ಕಂಡುಕೊಳ್ಳಬಹುದು ಇದು ತಮಗಾಗಿ ಮಾಡಿರುವ ಬಹಳ ವಿಶೇಷ ಯೋಜನೆಯಾಗಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ರಾಜೇಶ್ ಮಾತನಾಡಿ, ನಮ್ಮ ಸಂಸ್ಥೆಯ ಮೂಲಕ ಮಹಿಳೆಯರಿಗೆ ಶಕ್ತಿ ತುಂಬಲು ಹಲವು ಸ್ವ ಉದ್ಯೋಗವನ್ನು ನೀಡಿದ್ದು, ಟೈಲರಿಂಗ್ ತರಬೇತಿಯೂ ಸಹ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ಉತ್ತಮ ವೇದಿಕೆಯಾಗಿದೆ. ಅದನ್ನು ತಾವೆಲ್ಲರೂ ಸದುಪಯೋಗ ಮಾಡಿಕೊಂಡು ಆದಾಯ ಗಳಿಸಬೇಕು ಎಂದು ತಿಳಿಸಿದರು.
ಎಸ್‌ಬಿಐ ಬ್ಯಾಂಕಿನ ಪ್ರಕಾಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆ ಸಾಕಷ್ಟು ಸಾಮಾಜಿಕ ಕೆಲಸ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಿದ್ದು,ಅದರಲ್ಲೂ ಸಬಲೀಕರಣದ ಹೆಜ್ಜೆ ಇಡುತ್ತಿದೆ ಧರ್ಮಸ್ಥಳದ ಸಂಸ್ಥೆಗೆ ಎಸ್‌ಬಿಐ ಕೂಡ ಹೆಚ್ಚಿನ ಸಹಕಾರವನ್ನು ನೀಡುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: Tumkur News: ಶಿರಾ ನಗರಸಭೆಯ ಸಾಮಾನ್ಯ ಸಭೆ: ಹಲವು ಸದಸ್ಯರ ಗೈರು
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯೆ ಮಂಗಳ ಗೌರಮ್ಮ, ಅಸ್ಮಿನ್ ತಾಜ್, ಭಾರತಿ, ವಕೀಲ ನಂದೀಶ್, ಸಂಸ್ಥೆಯ ಮಂಜುನಾಥ, ನಿಟ್ಟೂರು ವಲಯದ ಸೇವಾಪ್ರತಿನಿಧಿಗಳು ಹಾಜರಿದ್ದರು.