ಶಿರಾ: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ (Government Polytechnic College) ಆವರಣದಲ್ಲಿ ಶುಕ್ರವಾರ ವಿದ್ಯಾರ್ಥಿ ನಿಲಯವನ್ನು ಶಾಸಕ ಟಿ.ಬಿ. ಜಯಚಂದ್ರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಶಿರಾ ಕೈಗಾರಿಕಾ ಕ್ಷೇತ್ರದಲ್ಲಿ ಸರ್ವತೋಮುಖ ಅಭಿವೃದ್ಧಿ ಕಾಣುತ್ತಿರುವ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿದ್ಯಾಭ್ಯಾಸ ನೀಡುವ ಉದ್ದೇಶದಿಂದ ಪ್ರಾರಂಭಿಸಿದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಈಗ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ತೆರೆಯಲಾಗುತ್ತದೆ ಎಂದ ಅವರು, ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಶಿರಾದಲ್ಲಿ ಬೇಡಿಕೆ ಇರುವ ಕೋರ್ಸ್‌ಗಳನ್ನು ತೆರೆಯಲು ಮನವಿಯನ್ನು ಸಲ್ಲಿಸಿದ್ದು, ಇದಕ್ಕೆ ಅವರು ಮುಂದಿನ ದಿನಗಳಲ್ಲಿ ಪ್ರಾರಂಭಿಸುವ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಗೌರಿಬಿದನೂರು ಶಾಸಕ ಪುಟ್ಟಸ್ವಾಮಿ ಗೌಡ ಮಾತನಾಡಿ, ಸಿಎಸ್ಆರ್ ನಿಧಿ ಅಡಿಯಲ್ಲಿ ಎಲೆಕ್ಟ್ರಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಕ್ಕೆ ಉಪಕರಣಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಮೇಜರ್ ಅನಿಲ್ ಕುಮಾರ್, ಉದ್ಯಮಿ ದಿಲೀಪ್ ಕುಮಾರ್ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.