ಕುಣಿಗಲ್: ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಫೆ. 17ರಂದು ಶನಿವಾರ ಡಿ.ಕೆ.ಎಸ್. ಚಾರಿಟಬಲ್ ಟ್ರಸ್ಟ್ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವರ ಸಹಯೋಗದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಏರ್ಪಡಿಸಲಾಗಿದೆ ಎಂದು ಉದ್ಯೋಗ ಮೇಳದ ಆಯೋಜಕ ಹಾಗೂ ಅಕ್ಷರ ಫೌಂಡೇಶನ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಕುಮಾರ್ ಉಪ್ಪಾರ್ (Tumkur News) ತಿಳಿಸಿದರು.
ಪಟ್ಟಣದ ಸಂಸದರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಡಿ.ಕೆ. ಸುರೇಶ್ ಹಾಗೂ ಶಾಸಕ ಡಾ.ರಂಗನಾಥ್ ಅವರ ನೇತೃತ್ವದಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ರವರೆಗೆ ಉದ್ಯೋಗ ಮೇಳ ನಡೆಯಲಿದೆ, ವಿದ್ಯಾವಂತ ನಿರುದ್ಯೋಗಿ ಯುವಕ-ಯುವತಿಯರು ಈ ಸದಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಇದನ್ನೂ ಓದಿ: Karnataka Budget 2024 : ಕರ್ನಾಟಕದ ಕರಾವಳಿಯ ನದಿಗಳ ಮೇಲೆ ಮೆಟ್ರೊ; ಏನಿದು ಹೊಸ ಯೋಜನೆ?
ಈ ಬೃಹತ್ ಉದ್ಯೋಗ ಮೇಳದಲ್ಲಿ ರಾಜ್ಯದ ಪ್ರತಿಷ್ಠಿತ ಖಾಸಗಿ ಕಂಪನಿಗಳು ಹಾಗೂ ಸಂಸ್ಥೆಗಳು ಮತ್ತು ಬ್ಯಾಂಕ್ಗಳು ಭಾಗವಹಿಸುತ್ತಿದ್ದು, ಸುಮಾರು 20 ಸಾವಿರ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲಾಗುವುದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಸ್ಥಳದಲ್ಲಿ ನೇಮಕಾತಿ ಪತ್ರವನ್ನು ನೀಡಲಾಗುವುದು ಎಂದು ಅವರು ತಿಳಿಸಿದರು.
ಎಂಟನೇ ತರಗತಿಯಿಂದ ಮೇಲ್ಪಟ್ಟು ಪದವಿ ಇನ್ನಿತರೆ ವಿದ್ಯಾರ್ಹತೆ ಹೊಂದಿದ 18 ರಿಂದ 33 ವಯೋಮಿತಿವುಳ್ಳ ನಿರುದ್ಯೋಗಿ ಯುವಕ-ಯುವತಿಯರು ಈ ಬೃಹತ್ ಉದ್ಯೋಗ ಮೇಳದಲ್ಲಿ ತಮ್ಮ ಸ್ವ ವಿವರದೊಂದಿಗೆ ಪಾಲ್ಗೊಳ್ಳಬಹುದಾಗಿದೆ ಎಂದರು.
ಇದನ್ನೂ ಓದಿ: IND vs ENG: 500 ವಿಕೆಟ್ಗಳ ಸರದಾರನಾದ ಆರ್. ಅಶ್ವಿನ್; ಈ ಸಾಧನೆ ಮಾಡಿದ 2ನೇ ಭಾರತೀಯ
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್, ಪ್ರಚಾರ ಸಮಿತಿ ಸದಸ್ಯ ಶಂಕರ್, ಕಾಂಗ್ರೆಸ್ ಕಾರ್ಮಿಕ ಘಟಕದ ತಾಲೂಕು ಅಧ್ಯಕ್ಷ ಶ್ರೀನಿವಾಸ್, ಮುಖಂಡರಾದ ಪಾಪಣ್ಣ, ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.