Site icon Vistara News

Tumkur News: 2040ರ ವೇಳೆಗೆ ಚಂದ್ರನ ಮೇಲೆ ಮನುಷ್ಯನನ್ನು ಕಳುಹಿಸಲು ಇಸ್ರೊ ತಯಾರಿ: ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್‌

Agricultural and Industrial Material Exhibition at shira

ಶಿರಾ: 2040ರಲ್ಲಿ ಚಂದ್ರನ (Moon) ಮೇಲೆ ಮಾನವನನ್ನು ಕಳುಹಿಸಲು ಇಸ್ರೊ (ISRO) ತಯಾರಿ ನಡೆಸಿದೆ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿಯ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಜಾತ್ರಾ ಮಹೋತ್ಸವದ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ವೇದಿಕೆಯಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ವಿಜ್ಞಾನ ಮೇಳ ಹಾಗೂ ಶಿಕ್ಷಕರಿಗೆ ಮೌಲ್ಯಯುತ ಶಿಕ್ಷಣ ವಿಚಾರಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಪ್ರಶ್ನಿಸುವ ಮನೋಭಾವ, ಕುತೂಹಲ ಉಂಟಾಗುತ್ತದೆ. ಆಗ ಪೋಷಕರು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ. ಪಾಲಕರು ತಮ್ಮ ಒತ್ತಡದ ಬದುಕಿನ ಅವಸರಗಳಿಗೆ ಬಾಲ್ಯದ ಅಮೂಲ್ಯವಾದ ಕ್ಷಣಗಳನ್ನು ಚಿವುಟಬಾರದು ಎಂದು ತಿಳಿಸಿದರು.

ಇದನ್ನೂ ಓದಿ: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 11 ಜನರ ಸಾವು, 60ಕ್ಕೂ ಹೆಚ್ಚು ಮಂದಿಗೆ ಗಾಯ

ಎಷ್ಟೋ ಸಂಶೋಧನೆಗಳಿಗೆ ಕುತೂಹಲವೇ ಮೂಲವಾಗಿದೆ. ಇದನ್ನು ತಣಿಸುವ ಸಾಹಸವೇ ಪ್ರಯತ್ನವಾಗಿದ್ದು, ಪ್ರತಿಯೊಬ್ಬರೂ ಏನಾದರೊಂದು ಹೊಸತನ್ನು ಸಂಶೋಧಿಸುವ ಪ್ರಯತ್ನ ಮಾಡುವ ಮನೋಭಾವ ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಮಾತನಾಡಿ, ವಿಜ್ಞಾನ ಎಂದರೆ ಪ್ರತಿಯೊಂದು ಹೊಸತನವನ್ನು ಹುಡುಕುವ ಮೂಲವಾಗಿದೆ. ಮಕ್ಕಳು ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಪಡೆದು ಪ್ರತಿಭಾನ್ವಿತರಾಗಿ ಹೊರಹೊಮ್ಮಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಶಿರಾ ತಾಲೂಕಿನ ತಾಳಗುಂದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಪ್ರಿಯಾಂಕ ಎಂ.ಎನ್. ರಾಷ್ಟ್ರ ಮಟ್ಟದ ವಸ್ತುಪ್ರದರ್ಶನ ಮತ್ತು ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಸ್ತುತ ಜಪಾನ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಹಿನ್ನಲೆಯಲ್ಲಿ ವಿದ್ಯಾರ್ಥಿನಿ ಪ್ರಿಯಾಂಕ ಎಂ.ಎನ್. ಮತ್ತು ಮಾರ್ಗದರ್ಶಿ ಶಿಕ್ಷಕಿ ರೂಪ ಟಿ.ವಿ.ತಾಳಗುಂದ ಅವರನ್ನು ಇಸ್ರೋ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್ ಕುಮಾರ್ ಹಾಗೂ ಗಣ್ಯರು ಗೌರವಿಸಿ, ಸನ್ಮಾನಿಸಿದರು.

ಇದನ್ನೂ ಓದಿ: Nirup Bhandari: ನಿರೂಪ್‌ ಅಭಿನಯದ ʼಸತ್ಯ ಸನ್ ಆಫ್ ಹರಿಶ್ಚಂದ್ರʼ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್. ಕೃಷ್ಣಪ್ಪ, ಮಧುಗಿರಿ ಡಯಟ್ ಪ್ರಾಂಶುಪಾಲ ಗಂಗಾಧರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಗಂಗಾಧರ್, ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆ ಪ್ರಾಂಶುಪಾಲ ತಿಮ್ಮರಾಜು, ಕ್ಷೇತ್ರ ಸಂಪನ್ಮೂಲ ಸಮನ್ವಯ ವ್ಯಕ್ತಿ ಕುಮಾರ್, ಮುಖಂಡರಾದ ಶ್ರೀನಿವಾಸ್, ಮದ್ದೇವಳ್ಳಿ ರಾಮಕೃಷ್ಣ, ಮಂಜುನಾಥ್, ಪವನ್, ಹನುಮಂತರಾಜು, ವಿಜಯಕುಮಾರ್ ಹಾಗೂ ಎ.ಆರ್. ಶ್ರೀನಿವಾಸಯ್ಯ, ಸುಹಾಸಿನಿ ಕಿರಣ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Exit mobile version