ಶಿರಾ: ಲೋಕಸಭಾ ಸಾರ್ವತ್ರಿಕ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆಗೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಶಿರಾ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಸೋಮಪ್ಪ ಕಡಕೋಳ (Tumkur News) ತಿಳಿಸಿದರು.
ನಗರದ ಆಡಳಿತ ಸೌಧದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Breast cancer: ಭಾರತದಲ್ಲಿ ಹೆಚ್ಚುತ್ತಿದೆ ಸ್ತನ ಕ್ಯಾನ್ಸರ್ ಪ್ರಮಾಣ! ಏನಿದಕ್ಕೆ ಕಾರಣ?
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 1,13,788 ಪುರುಷರು ಹಾಗೂ 1,12,898 ಮಹಿಳಾ ಮತದಾರರು ಹಾಗೂ 8 ಇತರೆ ಮತದಾರರು ಸೇರಿದಂತೆ ಒಟ್ಟು 2,26,694 ಮತದಾರರು ಮತ ಚಲಾಯಿಸಲಿದ್ದು, ಏಪ್ರಿಲ್ 26ರಂದು ಶುಕ್ರವಾರ ಮತದಾನ ನಡೆಯಲಿದೆ.
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ 266 ಮತಗಟ್ಟೆಗಳು ಇದ್ದು, ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಿಗಾವಹಿಸಲು ಒಟ್ಟು 8 ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಲಾಗಿದೆ ಎಂದು ವಿವರಿಸಿದರು.
ಮತದಾನ ಹೆಚ್ಚಳಕ್ಕೆ ಕ್ರಮ
ಸ್ವೀಪ್ ಕಾರ್ಯದಡಿಯಲ್ಲಿ ಜಿಲ್ಲೆಯ ಎಲ್ಲ ಮತದಾರರು ಮತಗಟ್ಟೆಗೆ ತೆರಳಿ ಮತ ಚಲಾಯಿಸುವಂತೆ ತಾಲೂಕು ಅಡಳಿತ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ಇದರ ಜತೆಗೆ ಕಡಿಮೆ ಮತದಾನವಾಗಿರುವ ಮತಗಟ್ಟೆ ಪ್ರದೇಶಗಳ ವ್ಯಾಪ್ತಿಯಲ್ಲಿ ಸ್ವೀಪ್ ಚಟುವಟಿಕೆಗಳ ಮೂಲಕ ಜಾಗೃತಿ ಮೂಡಿಸಿ, ಮತದಾನ ಪ್ರಮಾಣ ಹೆಚ್ಚಳಕ್ಕೆ ಅಗತ್ಯ ಕ್ರಮವಹಿಸಲಾಗಿದೆ ಎಂದರು.
85 ವರ್ಷ ಮೇಲ್ಪಟ್ಟ ಮತದಾರರಿಗೆ ಹಾಗೂ ವಿಶೇಷಚೇತನ ಮತದಾರರಿಗೆ ಮನೆಯಲ್ಲಿಯೇ ಮತದಾನಕ್ಕೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರು ಕಡ್ಡಾಯವಾಗಿ ಮನೆಯಲ್ಲಿಯೇ ಮತದಾನ ಮಾಡಬೇಕು ಎಂಬುವುದು ಕಡ್ಡಾಯವಲ್ಲ. ಇದೊಂದು ಆಯ್ಕೆಯಾಗಿದೆ ಎಂದು ತಿಳಿಸಿದ ಅವರು, ಈಗಾಗಲೇ 85 ವರ್ಷ ಮೇಲ್ಪಟ್ಟವರಿಗೆ ಹಾಗೂ ವಿಶೇಷಚೇತನ ಮತದಾರರಿಗೆ ಅಂಚೆ ಮತ ಪತ್ರ 12ಡಿ ಫಾರಂ ವಿತರಣೆ ಮಾಡಲಾಗುತ್ತಿದ್ದು, 12ಡಿಗೆ ಒಪ್ಪಿಗೆ ಸೂಚಿಸಿದ ನಂತರ ಮನೆ ಮತದಾನದ ಕುರಿತು ಪೂರ್ವಭಾವಿಯಾಗಿ ಮಾಹಿತಿ ನೀಡಲಾಗುವುದು. ಅಂತಹವರು ಮನೆಯಲ್ಲಿಯೇ ಹಾಜರಿದ್ದು, ಮತದಾನ ಮಾಡಬೇಕು. 12ಡಿ ಗೆ ಒಪ್ಪಿಗೆ ಸೂಚಿಸಿದ ನಂತರ ಯಾವುದೇ ಕಾರಣಕ್ಕೂ ಮತಗಟ್ಟೆಗೆ ಬಂದು ಮತ ಚಲಾಯಿಸಲು ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: RTE Application 2024 : ಆರ್‌ಟಿಇ ಪ್ರವೇಶಕ್ಕೆ ಆಹ್ವಾನ; ಅರ್ಜಿ ಸಲ್ಲಿಕೆಗೆ ಏ.22 ಕೊನೆ ದಿನ
ಈ ಸಂದರ್ಭದಲ್ಲಿ ಶಿರಾ ತಹಸೀಲ್ದಾರ್ ಡಾ. ದತ್ತಾತ್ರೇಯ ಗಾಧ, ಉಪ ತಹಸೀಲ್ದಾರ್ ನಾಗರಾಜ್, ಸಿಬ್ಬಂದಿ ಉಪಸ್ಥಿತರಿದ್ದರು.