ಕೊರಟಗೆರೆ: ಕರ್ನಾಟಕ ಸೇರಿದಂತೆ ಬಿಜೆಪಿಯು (BJP) ಅಧಿಕಾರ ಕಳೆದುಕೊಂಡಿರುವ ರಾಜ್ಯಗಳ ಮೇಲೆ ಕೇಂದ್ರ ಸರ್ಕಾರವು (Central Government) ಮಲತಾಯಿ ಧೋರಣೆ ತೋರುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ (Tumkur News) ಆರೋಪಿಸಿದರು.
ಪಟ್ಟಣದ ರಾಜೀವ್ ಭವನದಲ್ಲಿ ಪಕ್ಷದ ವಿವಿಧ ಪದಾಧಿಕಾರಿಗಳು ಹಾಗೂ ಮುಖಂಡರ ಜತೆ ಸಭೆ ನಡೆಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಬರ ಪರಿಹಾರ, ಅನುದಾನ ಹಂಚಿಕೆ, ಯೋಜನೆ ನೀಡುವುದರಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದರು.
ದೇಶದಲ್ಲಿ ಒಕ್ಕೂಟ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ ಎಂಬುದನ್ನು ಕೇಂದ್ರ ಸರ್ಕಾರ ಮರೆತಿದೆ. ರಾಜ್ಯದಲ್ಲಿ ಭೀಕರ ಬರಗಾಲವಿದ್ದರೂ ಜನರ ಸಂಕಷ್ಟಕ್ಕೆ ಈವರೆಗೂ ಸ್ಪಂದಿಸಿಲ್ಲ. ಅನುದಾನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕಾದ ಪರಿಸ್ಥಿತಿ ಬಂದಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಜನರು ಬಿಜೆಪಿಯನ್ನು ತಿರಸ್ಕರಿಸಲಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: Virat kohli : ಬೃಹತ್ ದಾಖಲೆಯೊಂದರ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ
ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಆಡುವ ಮಾತುಗಳನ್ನು ಗಮನಿಸಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವಿದೆ ಎನಿಸುತ್ತದೆ. ಒಂದು ದೇಶ ಒಂದು ಚುನಾವಣೆಗೆ ಮುಂದಾಗಿದ್ದು, ಸಂವಿಧಾನ ಬದಲಾಯಿಸಲು ಪ್ರಾರಂಭಿಸಿದ್ದಾರೆ ಎಂದು ಆರೋಪಿಸಿದರು.
ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮುದ್ದಹನುಮೇಗೌಡ ಅವರು ಸಜ್ಜನ ರಾಜಕಾರಣಿ. ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಧ್ವನಿ ಎತ್ತಿದವರು. ಬಿಜೆಪಿ ಅಭ್ಯರ್ಥಿ ಸೋಮಣ್ಣ ತುಮಕೂರಿನವರಲ್ಲ. ಸಂಸದ ಬಸವರಾಜು ಸಂಸತ್‌ನಲ್ಲಿ ಒಮ್ಮೆಯು ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ. ಹೊರಗಿನವರನ್ನು ಗೆಲ್ಲಿಸಿದರೆ ಯಾವ ಕೆಲಸ ಮಾಡಲು ಸಾಧ್ಯ. ಸದಾ ಜನರ ಪರವಾಗಿ ನಿಲ್ಲುವ ಮುದ್ದಹನುಮೇಗೌಡ ಅವರನ್ನು ಜನ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Fire Tragedy: ಬೆಂಕಿ ಅವಘಡ; ಉಸಿರುಗಟ್ಟಿ ಮೃತಪಟ್ಟ ಸಹೋದರಿಯರು
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎಸ್.ಪಿ ಮುದ್ದಹನುಮೇಗೌಡ ಅವರು ಏಪ್ರಿಲ್ 4ರಂದು ಬೆಳಿಗ್ಗೆ 10:30 ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಜನರು ಭಾಗವಹಿಸುವ ಮೂಲಕ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಿಸಬೇಕು ಎಂದು ತಿಳಿಸಿದರು.