ಶಿರಾ: ತಾಲೂಕಿನ ಭೂವನಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ತಾಲೂಕು ಆಡಳಿತದ ವತಿಯಿಂದ ಮಂಗಳವಾರ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ (Foot and Mouth Flu Vaccination Campaign) ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಶಾಸಕ ಟಿ.ಬಿ.ಜಯಚಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಅಭಿಯಾನ ಇಂದಿನಿಂದ ಅ.25 ರವರೆಗೆ ನಡೆಯಲಿದ್ದು, ರೈತರು, ಜಾನುವಾರುಗಳ ಮಾಲೀಕರು ತಮ್ಮ ಜಾನುವಾರುಗಳಿಗೆ ಲಸಿಕೆ ಕೊಡಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ರಾಸುಗಳನ್ನು ಕಾಲುಬಾಯಿ ರೋಗದಿಂದ ಮುಕ್ತಗೊಳಿಸಲು ಲಸಿಕೆ ನೀಡುವ ಕಾರ್ಯದಲ್ಲಿ ರಾಜ್ಯವು ದೇಶದಲ್ಲಿಯೇ ನಾಲ್ಕನೇ ಸ್ಥಾನದಲ್ಲಿದೆ ಎಂದು ಹೇಳಿದರು.
ಇದನ್ನೂ ಓದಿ: Namma Metro : ಮೆಟ್ರೋಗೆ ಚೀನಾದಿಂದ ಬರಲಿದೆ 12 ಬೋಗಿ; 2024ಕ್ಕೆ ಚಾಲಕ ರಹಿತ ಓಡಾಟ
ತಾಲೂಕಿನಲ್ಲಿ ಕಾಲುಬಾಯಿ ಜ್ವರದ ಲಸಿಕೆ ನೀಡಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ, ಪಶುಪಾಲನಾ ಇಲಾಖೆಯ ತಂಡದ ಲಸಿಕೆದಾರರು, ಮೇಲ್ವಿಚಾರಕರಿಗೆ ಶೇ. 100ರಷ್ಟು ಪ್ರಗತಿ ಸಾಧಿಸಲು ಸೂಚಿಸಲಾಗಿದೆ ಎಂದು ತಿಳಿಸಿದರು.
ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 53864 ಜಾನುವಾರುಗಳಿಗೆ ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ, ತಾಲೂಕಿನಲ್ಲಿ ತಂಡ ರಚಿಸಲಾಗಿದ್ದು, ಪ್ರತಿ ಗ್ರಾಮಗಳಲ್ಲಿ ಬೆಳಗ್ಗೆ 6 ರಿಂದ 10.30 ಹಾಗೂ ಸಂಜೆ 5 ರಿಂದ 7 ರವರೆಗೆ ಲಸಿಕೆ ನೀಡಲಾಗುತ್ತದೆ. ತಂಡವು ಗ್ರಾಮಗಳಿಗೆ ಭೇಟಿ ನೀಡಿದಾಗ ರೈತರು, ಜಾನುವಾರು ಮಾಲೀಕರು ತಮ್ಮ ಜಾನುವಾರುಗಳಿಗೆ ಕಾಲುಬಾಯಿ ಜ್ವರದ ಲಸಿಕೆಯನ್ನು ಹಾಕಿಸಿ ಸಹಕಾರ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ: World Cup 2023 : ವಿಶ್ವ ಕಪ್ಗೆ ಲಂಕಾ ತಂಡ ಪ್ರಕಟ, ಪ್ರಮುಖ ಸ್ಪಿನ್ನರ್ಗೆ ಇಲ್ಲ ಚಾನ್ಸ್
ಈ ಸಂದರ್ಭದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ವೈದ್ಯರು ಸೇರಿದಂತೆ ಭೂವನಹಳ್ಳಿ ಗ್ರಾಮ ಪಂಚಾಯಿತಿ ಆಡಳಿತ ಹಾಗೂ ವಿವಿಧ ಮುಖಂಡರು ಹಾಜರಿದ್ದರು.