ಗುಬ್ಬಿ: ಕನ್ನಡ ಸಾಹಿತ್ಯವನ್ನು (Kannada Literature) ಶ್ರೀಮಂತಗೊಳಿಸುವ ಜತೆಗೆ ರೈತರಲ್ಲಿ (Farmers) ಹಾಗೂ ಜನಸಾಮಾನ್ಯರಲ್ಲಿ ಪರಿಸರ (Environment) ಕಾಳಜಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಸ್ಯಯಜ್ಞ ತಂಡವು ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಾಹಿತಿ ಸಂತೋಷ್ ಮಡೆನೂರು ತಿಳಿಸಿದರು.
ತಾಲೂಕಿನ ಸಾವಯವ ಕೃಷಿಕ ಮಹೇಶ್ ಅವರ ಮಣ್ಣಿನ ಮನೆಯಲ್ಲಿ ಶುಕ್ರವಾರ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಪ್ರಾಕೃತಿಕ ವಿಕೋಪ ಹಾಗೂ ಪರಿಸರ ವಿನಾಶದ ಬಗ್ಗೆ ಜಾಗೃತಿ ಮೂಡಿಸಲು ಸಾಹಿತ್ಯ ರಚನೆಯ ಮೂಲಕ ಪ್ರಯತ್ನ ಮಾಡಲಾಗುತ್ತಿದೆ. ಸಸ್ಯಯಜ್ಞ ತಂಡದ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿಸರ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಇದನ್ನೂ ಓದಿ: Sirsi News:ಅಕ್ರಮ ದಾಸ್ತಾನು ಮಾಡಿದ್ದ 64.950 ಕೆಜಿ ತೂಕದ ಶ್ರೀಗಂಧ ವಶ
ಯಾವುದೇ ಫಲಾಪೇಕ್ಷೆ ಇಲ್ಲದೆ ಕೇವಲ ಜಾಗೃತಿ ಮೂಡಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ. ಕೇವಲ ಮಾತನಾಡುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎನ್ನುವುದನ್ನು ಅರಿತಿರುವ ನಾವು ನಿರಂತರವಾಗಿ ಜನರ ಒಡನಾಟದೊಂದಿಗೆ ಉತ್ತಮ ಕೆಲಸಗಳನ್ನು ಮಾಡುವ ಉದ್ದೇಶವನ್ನು ಹೊಂದಿದ್ದೇವೆ. ಉತ್ತಮ ಸಾಹಿತ್ಯ ರಚನೆಯ ಮೂಲಕ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಕೃಷಿಕ ಮಹೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಈಡಾಗುತ್ತಿತ್ತುವುದರಿಂದ ಅವರಲ್ಲಿ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ಪ್ರಸ್ತುತ ಸಂದರ್ಭದಲ್ಲಿ ಸಾವಯವ ಪದ್ಧತಿ ಕೃಷಿಯನ್ನು ಆಯ್ಕೆ ಮಾಡಿಕೊಳ್ಳುವುದು ರೈತರಿಗೆ ಅನಿವಾರ್ಯವಾಗಿದೆ ಎಂದರು.
ಬರಹಗಾರರು ಕನ್ನಡ ಸಾಹಿತ್ಯದ ಜತೆಯಲ್ಲಿಯೇ ಕೃಷಿ ಸಾಹಿತ್ಯ ರಚನೆಯತ್ತಲೂ ಗಮನ ಹರಿಸಿದರೆ ರೈತರಲ್ಲಿ ಜಾಗೃತಿ ಮೂಡಿಸಲು ಸಾಧ್ಯವಾಗುವುದು ಎಂದರು .
ರೈತರು ಪ್ರಕೃತಿದತ್ತವಾಗಿ ಬೆಳೆಗಳನ್ನು ಬೆಳೆಯುವುದನ್ನು ರೂಢಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಇದೇ ವೇಳೆ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನೇಗಿಲಿಗೆ ಪೂಜೆ ಸಲ್ಲಿಸುವ ಮೂಲಕ ನೇಗಿಲು ಕಾವ್ಯ ಅಭಿಯಾನಕ್ಕೆ ಚಾಲನೆ ನೀಡಲಾಯಿತು ಹಾಗೂ ಕೃಷಿಕ ಮಹೇಶ್ ರವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಸ್ಯ ಯಜ್ಞ ತಂಡದ ಪ್ರಭುಸ್ವಾಮಿ, ರೈತರಾದ ಮೋಹನ್ ಕುಮಾರ್, ಶಿವನಂಜಪ್ಪ,ರಾಜಣ್ಣ,ಕಂಬಯ್ಯ, ಮಲ್ಲಿಕಾರ್ಜುನ, ಪರಶುರಾಮ್, ಹಾಗೂ ಹಲವಾರು ಗ್ರಾಮಸ್ಥರು ಹಾಜರಿದ್ದರು.