ಕೊರಟಗೆರೆ: ನರೇಗಾ ಯೋಜನೆಯಡಿ ಅನುಷ್ಠಾನ ತರುವಲ್ಲಿ ತುಮಕೂರು (Tumkur News) ಜಿಲ್ಲೆಯಲ್ಲಿಯೇ ಕೊರಟಗೆರೆ (Koratagere) ಕ್ಷೇತ್ರವು ಕೊನೆಯ ಸ್ಥಾನದಲ್ಲಿದೆ. ನರೇಗಾ ಯೋಜನೆಯ ಬಗ್ಗೆ ನಿರ್ಲಕ್ಷ್ಯ ವಹಿಸುವ ಪಿಡಿಒ (PDO) ಮತ್ತು ಎಂಜಿನಿಯರ್‌ಗಳನ್ನು (Engineers) ಮುಲಾಜಿಲ್ಲದೇ ಅಮಾನತು ಮಾಡುತ್ತೇನೆ ಎಂದು ತುಮಕೂರು ಜಿ.ಪಂ ಸಿಇಒ ಪ್ರಭು ಜಿ. ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಪಂ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ 24 ಗ್ರಾಪಂಗಳ ಪಿಡಿಒ ಮತ್ತು ನರೇಗಾ ಎಂಜಿನಿಯರ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 207 ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳ ಆಟದ ಮೈದಾನ, ಕಾಪೌಂಡು, ಶೌಚಾಲಯ ಮತ್ತು ಚರಂಡಿ ನಿರ್ಮಾಣದ ಅನುಷ್ಠಾನಕ್ಕೆ ಗ್ರಾಪಂ ಪಿಡಿಒ, ಅಧ್ಯಕ್ಷರು ಮತ್ತು ಎಂಜಿನಿಯರ್ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದೆ. ಗ್ರಾಮೀಣ ಭಾಗದ ಗುಳೆ ಹೋಗುವುದನ್ನು ತಪ್ಪಿಸುವುದೇ ನರೇಗಾ ಯೋಜನೆಯ ಮುಖ್ಯ ಉದ್ದೇಶ ಆಗಿದೆ. ಗ್ರಾಮೀಣ ಜನರಿಗೆ ತಪ್ಪದೇ ನರೇಗಾ ಯೋಜನೆಯಡಿ ಕೆಲಸ ನೀಡಬೇಕಿದೆ ಎಂದು ತಿಳಿಸಿದರು.
ಇದನ್ನೂ ಓದಿ: Borewell Tragedy: ಕೊಳವೆಬಾವಿಗೆ ಬಿದ್ದ ಬಾಲಕ ಸಾವನ್ನು ಗೆದ್ದು ಬಂದ! ಹೀಗಿತ್ತು 20 ಗಂಟೆಗಳ ಕಾರ್ಯಾಚರಣೆ
ತುಮಕೂರು ಜಿಲ್ಲೆಯ 10 ಕ್ಷೇತ್ರದಲ್ಲಿ ಸುಮಾರು 40 ಸಾವಿರ ಮತ್ತು ಕೊರಟಗೆರೆ ಕ್ಷೇತ್ರಕ್ಕೆ 2500 ಸೈಟ್ ನೀಡಲು ರೂಪುರೇಷೆ ಸಿದ್ದವಾಗಿದೆ. ಕೊರಟಗೆರೆ ಕ್ಷೇತ್ರಕ್ಕೆ ಹೆಚ್ಚುವರಿ 4 ರಿಂದ 5 ಸಾವಿರ ಸೈಟ್ ನೀಡಲು ಭೂಮಿ ಗುರುತಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಗ್ರಾಮಸಭೆಯಲ್ಲಿ ಜಿಲ್ಲಾಮಟ್ಟದ ವಿಶೇಷ ಅಧಿಕಾರಿಗಳ ತಂಡ ಸೈಟ್ ಇಲ್ಲದವರಿಗೆ ನಿವೇಶನ ನೀಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.
ಗ್ರಾಪಂ ಪಿಡಿಒಗಳು ಕಡ್ಡಾಯವಾಗಿ ಕೇಂದ್ರಸ್ಥಾನದಲ್ಲಿಯೇ ಇದ್ದು ಹಾಜರಾತಿ ಇರಲೇಬೇಕು. ನರೇಗಾ ಯೋಜನೆ ಅಥವಾ ಸರ್ಕಾರದ ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯದ ಜತೆ ವಿಳಂಬ ಮಾಡುವ ಪಿಡಿಒಗಳ ವಿರುದ್ದ ಸರ್ಕಾರಕ್ಕೆ ವರದಿ ಕಳುಹಿಸುತ್ತೇನೆ. ಈಗಾಗಲೇ ತುಮಕೂರು ಜಿಲ್ಲೆಯಲ್ಲಿ 16 ಜನ ಪಿಡಿಒಗಳ ಅಮಾನತು ಆಗಿದ್ದಾರೆ. ಇದು ಇನ್ನಷ್ಟು ಹೆಚ್ಚು ಆಗಬಹುದು ಇದಕ್ಕೆ ಅವಕಾಶ ಮಾಡಿಕೊಡದೇ ಚುನಾವಣೆ ಇರಲಿ ಇಲ್ಲದೇ ಇರಲಿ ಜನರ ಬಳಿ ನಿಂತು ಕೆಲಸ ಮಾಡಿ ತೋರಿಸಿ ಎಂದು ಹೇಳಿದರು.
ಕುಡಿಯುವ ನೀರು ಸಮಸ್ಯೆ ಆದರೆ 24 ಗಂಟೆಯೊಳಗೆ ಗ್ರಾಪಂ ಅಧಿಕಾರಿ ವರ್ಗ ಸರಿಪಡಿಸಬೇಕಿದೆ. ಗ್ರಾಪಂಗೊಂದು ಉದ್ಯಾನವನ ನಿರ್ಮಾಣಕ್ಕಾಗಿ 24 ಸಾವಿರ ಸಸಿಗಳು ಸಾಮಾಜಿಕ ವಲಯ ಅರಣ್ಯದ ಬಳಿ ಸಿದ್ದವಾಗಿವೆ. ಸರ್ಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರದಲ್ಲಿ ಕಡ್ಡಾಯವಾಗಿ ಸಸಿಗಳನ್ನು ಬೆಳೆಸಬೇಕಿದೆ. ಗ್ರಾಮೀಣ ಜನತೆ ಗುಳೆ ಹೋಗದಂತೆ ಮುನ್ನಚ್ಚರಿಕೆ ಅಗತ್ಯ. ಇಲ್ಲವಾದರೆ ಗ್ರಾಪಂ ಪಿಡಿಒಗಳ ಮೇಲೆ ಕ್ರಮ ಆಗುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: SRH vs CSK: ಚೆನ್ನೈ ವಿರುದ್ಧ ಗೆಲುವಿನ ‘ಸನ್ರೈಸ್’ ನಿರೀಕ್ಷೆಯಲ್ಲಿ ಹೈದರಾಬಾದ್!
ಸಭೆಯಲ್ಲಿ ಮಧುಗಿರಿ ಗ್ರಾಮೀಣ ಮತ್ತು ಕುಡಿಯುವ ನೀರು ಇಇ ರವೀಶ್, ಕೊರಟಗೆರೆ ಎಇಇ ಕೀರ್ತಿನಾಯಕ್, ತಹಸೀಲ್ದಾರ್ ಮಂಜುನಾಥ ಕೆ., ತಾಪಂ ಇಒ ಅಪೂರ್ವ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಶಿಲ್ಪಾ, ನರೇಗಾ ಎಡಿಎ ಗುರುಮೂರ್ತಿ, ತಾಪಂ ಯೋಜನಾಧಿಕಾರಿ ಮಧುಸೂದನ್, 24 ಗ್ರಾಪಂಗಳ ಪಿಡಿಒ ಮತ್ತು ನರೇಗಾ ಎಂಜಿನಿಯರ್‌ಗಳು ಉಪಸ್ತಿತರಿದ್ದರು.