ಶಿರಾ: ಸಮರ್ಪಕ ಕುಡಿಯುವ ನೀರು (Drinking Water) ಒದಗಿಸುವಂತೆ ಆಗ್ರಹಿಸಿ, ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಮಾರುತಿ ನಗರದ ನಿವಾಸಿಗಳು ಶುಕ್ರವಾರ ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ (Tumkur News) ನಡೆಸಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣವಾಗಿದ್ದು, ಕೂಡಲೇ ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದರು. ಇದೇ ವೇಳೆ ಪ್ರತಿಭಟನಾಕಾರರು ಕಚೇರಿಗೆ ಬೀಗ ಜಡಿದು, ಸ್ಥಳೀಯ ಗ್ರಾಪಂ ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಘೋಷಣೆ ಕೂಗಿ, ಒತ್ತಾಯಿಸಿದರು.
ಇದನ್ನೂ ಓದಿ: Mary Kom: ಒಲಿಂಪಿಕ್ಸ್ಗೂ ಮುನ್ನ ಚೆಫ್-ಡಿ-ಮಿಷನ್ ಹುದ್ದೆಗೆ ಮೇರಿ ಕೋಮ್ ರಾಜೀನಾಮೆ
ಕಳೆದ ಹಲವು ದಿನಗಳಿಂದ ನಮ್ಮ ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ನಿತ್ಯ 2-3 ಕಿ.ಮೀ. ನಡೆದುಕೊಂಡು ಹೋಗಿ ನೀರು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಮೂರ್ನಾಲ್ಕು ಬಾರಿ ಗ್ರಾ.ಪಂ. ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಅಗತ್ಯ ಕ್ರಮ ಕೈಗೊಳ್ಳಬೇಕಾದ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನಲೆಯಲ್ಲಿ ಇಂದು ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಬುಕ್ಕಾಪಟ್ಟಣ ಗ್ರಾಮ ಪಂಚಾಯಿತಿ ಪಿಡಿಒ ಶಿವಶಂಕರ್ ಈ ಕುರಿತು ಪ್ರತಿಕ್ರಿಯಿಸಿ, ಗ್ರಾಪಂ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಕುಡಿಯುವ ನೀರಿನ ಸಮಸ್ಯೆಯಿದೆ, ಹೊಸದಾಗಿ ಬೋರ್‌ವೆಲ್ ಕೊರೆಸಲು ಅನುಮತಿ ನೀಡಲಾಗಿದ್ದು, ಶೀಘ್ರವೇ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಇದನ್ನೂ ಓದಿ: Rohit Sharma : ಟಿ20 ವಿಶ್ವ ಕಪ್ ಬಳಿಕ ರೋಹಿತ್ ನಿವೃತ್ತಿ? ಅವರುಹೇಳಿದ್ದೇನು?
ಪ್ರತಿಭಟನೆಯಲ್ಲಿ ಸ್ಥಳೀಯ ನಿವಾಸಿಗಳಾದ ಗೀತಮ್ಮ, ಗಿರಿಜಮ್ಮ, ಪುಷ್ಪಮ್ಮ, ಲತಮ್ಮ ಸೇರಿದಂತೆ ಗ್ರಾಮದ ನಿವಾಸಿಗಳು ಪಾಲ್ಗೊಂಡಿದ್ದರು.