ಕುಣಿಗಲ್: ಸಮರ್ಪಕ ಪಡಿತರ ವಿತರಣೆಗಾಗಿ ಆಗ್ರಹಿಸಿ, ಕುಣಿಗಲ್ ತಾಲೂಕಿನ ಹುತ್ರಿದುರ್ಗ ಗ್ರಾಮದಲ್ಲಿ ಬುಧವಾರ ಗ್ರಾಮಸ್ಥರು ಪ್ರತಿಭಟನೆ (Protest) ನಡೆಸಿದರು.
ಆಹಾರ ಇಲಾಖೆಯಿಂದ ಪಡಿತರ ವಿತರಿಸಲು ತಾಲೂಕಿನ ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪರವಾನಿಗೆ ನೀಡಲಾಗಿದ್ದು, ಆದರೆ ಕಳೆದ ನಾಲ್ಕು ತಿಂಗಳುಗಳಿಂದ ಸಮರ್ಪಕವಾಗಿ ಪಡಿತರ ವಿತರಣೆ ಮಾಡಲಾಗುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು.
ತಾಲೂಕಿನ ಸಂತೆಪೇಟೆ, ಬೆಟ್ಟಹಳ್ಳಿ, ಹುತ್ರಿಬೆಟ್ಟ, ಗುಲ್ಲಳ್ಳಿಪುರ, ಮೂಗನಪುರ, ತಾಂಡ್ಯ, ಯಲಚವಾಡಿ ಗ್ರಾಮಗಳಲ್ಲಿ ಸುಮಾರು 400 ಕಾರ್ಡುದಾರರು ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಆದರೆ ಹುತ್ರಿದುರ್ಗ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಅವರು ಕಳೆದ ನಾಲ್ಕು ತಿಂಗಳುಗಳಿಂದ ಸರಿಯಾದ ರೀತಿಯಲ್ಲಿ ಪಡಿತರ ಅಕ್ಕಿ ವಿತರಿಸಿಲ್ಲ. ಬಯೋಮೆಟ್ರಿಕ್ ಪಡೆದು ಪಡಿತರ ಅಕ್ಕಿ ನೀಡದೆ ವಂಚಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಮಹಿಳೆಯರು ದೂರಿದರು.
ಇದನ್ನೂ ಓದಿ: Kolar News: ಮುಂದಿನ ಸಭೆವರೆಗೆ ಅರಣ್ಯ ಭೂಮಿ ಒತ್ತುವರಿ ತೆರವು ಬೇಡ: ಸಿಎಂ ಸಿದ್ದರಾಮಯ್ಯ
ಬಳಿಕ ಸ್ಥಳಕ್ಕೆ ಆಗಮಿಸಿದ ಆಹಾರ ಇಲಾಖೆಯ ಸಿರಸ್ತೆದಾರ ಎಂ.ಕೆ.ರಾಜು ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಕೂಡಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಪಡಿತರ ವಿತರಣೆಗೆ ನೀಡಲಾಗಿರುವ ಪರವಾನಿಗೆ ರದ್ದುಗೊಳಿಸಿ ಬೇರೆಯವರಿಗೆ ಪರವಾನಿಗೆ ನೀಡಿ ಎಂದು ಒತ್ತಾಯಿಸಿದರು.
ಈ ಕುರಿತು ಆಹಾರ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಗಮನಕ್ಕೆ ತಂದು ಕ್ರಮ ಕೈಗೊಳ್ಳುವುದಾಗಿ ಆಹಾರ ಇಲಾಖೆಯ ಸಿರಸ್ತೆದಾರ ಎಂ.ಕೆ.ರಾಜು ಭರವಸೆ ನೀಡಿದರು.
ಇದನ್ನೂ ಓದಿ: ಕುಸ್ತಿ ಒಕ್ಕೂಟದ ವ್ಯವಹಾರ ನಡೆಸಲು ತ್ರಿಸದಸ್ಯ ತಾತ್ಕಾಲಿಕ ಸಮಿತಿ ನೇಮಿಸಿದ ಐಒಎ
ಈ ವೇಳೆ ಆಹಾರ ಇಲಾಖೆಯ ಅಧಿಕಾರಿ ಸಚಿನ್ ಉಪಸ್ಥಿತರಿದ್ದರು.