ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬಿ.ಡಿ.ಪುರ ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ, ವಿಜೃಂಭಣೆಯಿಂದ (Tumkur News) ನೆರವೇರಿತು.
ಗ್ರಾಮದಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಮೂರ್ತಿಯ ಪ್ರತಿಷ್ಠಾಪನೆ ಅಂಗವಾಗಿ ವಿಶೇಷ ಪೂಜೆ, ಹೋಮ ಹವನ ಹಾಗೂ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಶನಿ ಮಹಾತ್ಮ ಸೇವಾ ಟ್ರಸ್ಟ್‌ನ ಅಧ್ಯಕ್ಷ ಆನಂದ ಕುಮಾರ್ ಮಾತನಾಡಿ, ದೇವಾಲಯ ನಿರ್ಮಾಣ ಮಾಡಲು ಅನುದಾನದ ಕೊರತೆಯಿಂದ ಅರ್ಧಕ್ಕೆ ನಿಂತಿದ್ದ ಕಾರಣ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಹಾಗೂ ಎಂಟು ಹಳ್ಳಿಗಳ ಗ್ರಾಮಸ್ಥರು ಮತ್ತು ತುಮಕೂರು ಹೂವಿನ ಅಂಗಡಿಯ ಮಾಲೀಕರು ನೀಡಿದ ದೇಣಿಗೆಯಿಂದ ದೇವಾಲಯ ಇಂದು ಪೂರ್ಣಗೊಂಡು ಅದ್ಧೂರಿಯಾಗಿ ಕಾರ್ಯಕ್ರಮ ಯಶಸ್ವಿಗೊಂಡಿದೆ ಎಂದರು.
ಇದನ್ನೂ ಓದಿ: ICC Test Rankings: ಮತ್ತೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಮೇಲೇರಿದ ಯಶಸ್ವಿ ಜೈಸ್ವಾಲ್
ಬಳಿಕ ಮುಖಂಡ ಟಿ.ಸಿ. ರಾಮಯ್ಯ ಮಾತನಾಡಿ, ಕಳೆದ 9 ವರ್ಷದಿಂದ ದೇಗುಲದ ಅಭಿವೃದ್ಧಿ ಅರ್ಧಕ್ಕೆ ನಿಂತಿತ್ತು, ಈ ವಿಷಯ ಸಚಿವ ಡಾ.ಜಿ. ಪರಮೇಶ್ವರ್ ಅವರ ಗಮನಕ್ಕೆ ತಂದಾಗ ಸಚಿವರು 4 ಲಕ್ಷ ರೂ ಗಳು ಅನುದಾನ ನೀಡಿ, ದೇವಸ್ಥಾನದ ಕಾಮಗಾರಿ ಪೂರ್ಣಗೊಳ್ಳಲು ಸಹಾಯ ಮಾಡಿದರು. ಗ್ರಾಮಗಳಿಂದ ಆರತಿ ಮಹೋತ್ಸವ ಕೂಡ ಏರ್ಪಡಿಸಲಾಗಿತ್ತು ಎಂದು ತಿಳಿಸಿದರು.
ಬಿ.ಡಿ.ಪುರ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರು ದೇವಸ್ಥಾನಕ್ಕೆ ಆಗಮಿಸಿ, ದೇವರ ದರ್ಶನ ಪಡೆದರು. ಭಕ್ತರಿಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಪ್ರಸಾದ ವಿನಿಯೋಗ ಮಾಡಲಾಯಿತು.
ಇದನ್ನೂ ಓದಿ: KL Rahul: ಲಂಡನ್ನಲ್ಲಿ ಚಿಕಿತ್ಸೆ; ಐಪಿಎಲ್ ಟೂರ್ನಿಯಿಂದ ಹೊರಬೀಳಲಿದ್ದಾರೆ ರಾಹುಲ್!
ಈ ಸಂದರ್ಭದಲ್ಲಿ ಬಿ.ಡಿ.ಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಿವಕುಮಾರ್, ಗ್ರಾ.ಪಂ ಅಧ್ಯಕ್ಷ ಜಗದೀಶ್, ಟ್ರಸ್ಟ್‌ನ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.