ಶಿರಾ: ಶಿರಾ ತಾಲೂಕಿನಲ್ಲಿ ಶಿಕ್ಷಕರೊಬ್ಬರು (Teacher) ತಮ್ಮ ದೇಹ ದಾನ ಮಾಡುವ ಮೂಲಕ ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ.
ನಗರದ ಕೆ. ಮಲ್ಲಣ್ಣ ಸ್ಮಾರಕ ರಂಗನಾಥ ಪದವಿಪೂರ್ವ ಕಾಲೇಜಿನಲ್ಲಿ ಜೆಒಸಿ ವಿಭಾಗದಲ್ಲಿ ಸೇವೆ ಸಲ್ಲಿಸಿ, ಸ್ಥಳೀಯ ಸಂತೆಪೇಟೆಯ ಗಜಾನನ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಜಯಪ್ಪ (59) ಸೋಮವಾರ ರಾತ್ರಿ ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ತುಮಕೂರಿನ ಖಾಸಗಿ ಮೆಡಿಕಲ್ ಕಾಲೇಜಿಗೆ ದಾನವಾಗಿ ನೀಡಿದ್ದಾರೆ.
ಇದನ್ನೂ ಓದಿ: Shocking News : ನೀವು ಖರೀದಿಸಿದ ಬಾಟಲಿ ನೀರು ಶುದ್ಧವೇ? ಇಲ್ಲ ವಿಷಕಾರಿ ಪ್ಲಾಸ್ಟಿಕ್ ಉಂಟು!
ಶಿರಾ ನಗರದ ಸುಖೀನಗರ ಬಡಾವಣೆಯಲ್ಲಿ ವಾಸವಾಗಿದ್ದ ಮೃತ ಜಯಪ್ಪ ಅವರಿಗೆ ಕಳೆದ ಶುಕ್ರವಾರ ಹೃದಯಾಘಾತ ಸಂಭವಿಸಿದ್ದರಿಂದ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ದಿಢೀರನೇ ಕಾಣಿಸಿಕೊಂಡ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಸೋಮವಾರ ರಾತ್ರಿ ನಿಧನರಾಗಿದ್ದಾರೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಮೃತ ಜಯಪ್ಪ ಅವರು ಮರಣದ ನಂತರ ತಮ್ಮ ದೇಹ ದಾನ ಮಾಡಲು ಬಯಸಿದ್ದರು. ಅವರ ಆಸೆಯಂತೆ ಅವರ ದೇಹದಾನ ಮಾಡಿರುವುದಾಗಿ ಮೃತರ ಪತ್ನಿ ಹಾಗೂ ಪುತ್ರಿಯರು ತಿಳಿಸಿದ್ದಾರೆ. ತನ್ನ ಸಾವಿನ ನಂತರವೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗಲೆಂದು ಕೈಗೊಂಡ ಮೃತ ಜಯಪ್ಪ ಅವರ ಈ ನಿರ್ಧಾರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಮೃತ ಜಯಪ್ಪ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.