ಚಿಕ್ಕನಾಯಕನಹಳ್ಳಿ: ಮಕ್ಕಳಿಗೆ (Children) ಪಾಠ ಮಾಡುವುದು ಪ್ರತಿಯೊಬ್ಬ ಶಿಕ್ಷಕ, ಶಿಕ್ಷಕಿಯ (Teacher) ಕರ್ತವ್ಯ ಅದನ್ನು ಪ್ರಾಮಾಣಿಕವಾಗಿ ನಿರ್ವಹಿಸಿದಾಗ ವಿದ್ಯಾರ್ಥಿಗಳು (Students) ಶೈಕ್ಷಣಿಕವಾಗಿ ಪ್ರಗತಿ ಸಾಧಿಸುತ್ತಾರೆ ಎಂದು ಶಾಸಕ ಸಿ.ಬಿ. ಸುರೇಶಬಾಬು ಹೇಳಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಕರೇ ದಿಕ್ಕು, ಹೀಗಾಗಿ ಶಿಕ್ಷಕರು ಹೊಸ ಹೊಸ ಪ್ರಯೋಗ, ಕೌಶಲಗಳನ್ನು ಅಳವಡಿಸಿಕೊಳ್ಳಬೇಕು. ಸರ್ಕಾರಿ ಶಾಲೆಯ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಹಾಗೂ ಶಾಲೆಗಳ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಅನುದಾನ ತಂದಿದ್ದು, ಶೀಘ್ರವೇ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗುವುದು. ಅದನ್ನು ಬಳಸಿಕೊಂಡು ಶಿಕ್ಷಣದ ಪ್ರಗತಿ ಹೊಂದಬೇಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: Underground Transformer: ಮಲ್ಲೇಶ್ವರದಲ್ಲಿ ದೇಶದ ಮೊದಲ ಭೂಗತ ವಿದ್ಯುತ್ ಪರಿವರ್ತಕ ಕೇಂದ್ರ ಲೋಕಾರ್ಪಣೆ
ಇಓ ವಸಂತಕುಮಾರ್ ಮಾತನಾಡಿ, ಶಿಕ್ಷಕರು ತಮ್ಮ ವೃತ್ತಿಯನ್ನು ಸೇವಾ ಮನೋಭಾವದಿಂದ ಮಾಡುವ ಕೆಲಸವೆಂದು ಭಾವಿಸಬೇಕು ಎಂದ ಅವರು, ಗುಣ ಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡಬೇಕಿದೆ. ಒಮ್ಮೆ ಈ ವಿಚಾರದಲ್ಲಿ ಶಿಕ್ಷಕರು ಮೈಮರೆತರೆ ದೇಶ ನಿರ್ಮಾಣದ ವೇಗದಲ್ಲಿ ಗಣನೀಯವಾಗಿ ಕುಸಿತವಾಗಲಿದೆ ಎಂದು ಶಿಕ್ಷಕರ ಮಹತ್ವವನ್ನು ತಿಳಿಸಿದರು.
ಸಾಹಿತಿ ಹಿರೇಮಗಳೂರು ಕಣ್ಣನ್ ಅವರ ಉಪನ್ಯಾಸ ಸಭಿಕರನ್ನು ನಗೆಗಡಲಲ್ಲಿ ತೇಲಿಸಿತು. ಕಾರ್ಯಕ್ರಮದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಸೇವಾ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ಸಾಲಿನಲ್ಲಿ ನಿವೃತ್ತರಾದ ಬನಶಂಕರಯ್ಯ, ರಾಜಪ್ಪ ಸೇರಿದಂತೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: Weather report : ಬೆಂಗಳೂರು ಗಡ ಗಡ ; ಉತ್ತರ ಕರ್ನಾಟಕ ಮಳೆಯಿಂದ ತತ್ತರ!
ಈ ವೇಳೆ ತಹಸೀಲ್ದಾರ್ ನಾಗಮಣಿ, ಬಿಇಒ ಮನಮೋಹನ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಪರಶಿವಮೂರ್ತಿ, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಗವಿರಂಗಯ್ಯ, ತಾ. ಅಧ್ಯಕ್ಷ ಸುರೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಚ್. ಸುರೇಶ್, ಶಿವಕುಮಾರ್ ಹಾಜರಿದ್ದರು.