ಶಿರಾ: ತುಮಕೂರಿನ ಶಿರಾ ತಾಲೂಕಿನ ತಾವರೆಕೆರೆ ಗ್ರಾಮ ಪಂಚಾಯಿತಿ (Tumkuru News) ಅಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ ಬೆಂಬಲಿತರಾದ ರತ್ನಮ್ಮ ಮಹಾಲಿಂಗಯ್ಯ ಅವರು ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: High Court order: ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ಶಾಸಕತ್ವದಿಂದ ಅನರ್ಹ: ಕೋರ್ಟ್ ಆದೇಶ
ತಾವರೆಕೆರೆ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 21 ಸದಸ್ಯರಿದ್ದಾರೆ. ಮಹಿಳಾ ಮೀಸಲಾತಿ ಇರುವ ಈ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರತ್ನಮ್ಮ ಅವರ ವಿರುದ್ಧ ಬಿಜೆಪಿ ಬೆಂಬಲಿತ ಮಂಜಮ್ಮ ರಾಮಕೃಷ್ಣ ಅವರು ಸ್ಪರ್ಧಿಸಿದ್ದರು. ಆದರೆ ರತ್ನಮ್ಮ ಅವರು ಏಳು ಮತಗಳ ಅಂತರದಿಂದ ಮಂಜಮ್ಮ ಅವರನ್ನು ಸೋಲಿಸಿದ್ದಾರೆ. ಚುನಾವಣಾಧಿಕಾರಿಯಾಗಿ ಶಿರಾ ತಹಶೀಲ್ದಾರ್ ವಿವೇಕ್ ಶೇಣ್ವಿ ಅವರು ಕರ್ತವ್ಯ ನಿರ್ವಹಿಸಿದ್ದರು.
ಅಧ್ಯಕ್ಷೆಯಾಗಿ ಆಯ್ಕೆಯಾದ ರತ್ನಮ್ಮ ಅವರು ಮಾತನಾಡಿದ್ದು, “ಎಲ್ಲ ಸದಸ್ಯರು ಒಂದಾಗಿ ಅಭಿವೃದ್ಧಿಯತ್ತ ದುಡಿಯಬೇಕು. ನಮ್ಮ ಅವಧಿಯಲ್ಲಿ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗುವಂತಾಗಲಿ. ಊರಿನ ಸಮಸ್ಯೆಗಳ ಬಗ್ಗೆ ಗಮನಹರಿಸಿ. ಅಭಿವೃದ್ಧಿಗೆ ಹೆಚ್ಚಿನ ಒತ್ತು ಕೊಡಿ. ಗ್ರಾಮ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸಿ” ಎಂದು ಹೇಳಿದ್ದಾರೆ.