ರಾಯಚೂರು: ಲಾರಿ ಹಾಗೂ ಕ್ರೂಸರ್ ನಡುವಿನ ಅಪಘಾತದಲ್ಲಿ (Tumkur Accident) ಮೃತಪಟ್ಟಿರುವ ಕ್ರೂಸರ್ ಡ್ರೈವರ್ ಕೃಷ್ಣಪ್ಪ ಅವರಿಗೆ ವಿವಾಹವಾಗಿ ಮೂರು ವರ್ಷಗಳಷ್ಟೇ ಕಳೆದಿತ್ತು. ವಿಷಯ ತಿಳಿದ ಅವರ ಪತ್ನಿ ಸಹಿತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ದುಡಿಮೆಗಾಗಿ ಹೋದ ಮಗ ಹೆಣವಾಗಿ ಬಂದಿರುವುದನ್ನು ನೆನೆದು ಕೃಷ್ಣಪ್ಪ ತಾಯಿ ಹನಮಂತಿ ಕಣ್ಣೀರು ಹಾಕಿದ್ದಾರೆ. ಅಲ್ಲದೆ, ಪತಿಯ ಅಗಲಿಕೆಯಿಂದ ಪತ್ನಿ ಸಹ ಗೋಳಿಡುತ್ತಿದ್ದಾರೆ. ಆರು ವರ್ಷಗಳ ಹಿಂದೆ ಸೆಕೆಂಡ್ ಹ್ಯಾಂಡ್ ಕ್ರೂಸರ್ ಖರೀದಿ ಮಾಡಿದ್ದರು.
ವಾರದಲ್ಲಿ ಎರಡು ಬಾರಿ ಬೆಂಗಳೂರು ಪ್ರಯಾಣವೇ ಇರುತ್ತಿತ್ತು. ಹೆಚ್ಚಾಗಿ ಕೂಲಿ ಕಾರ್ಮಿಕರನ್ನು ಕರೆದೊಯ್ಯುವ ಟ್ರಿಪ್ ಅನ್ನೇ ಅವರು ಒಪ್ಪಿಕೊಳ್ಳುತ್ತಿದ್ದರು. ರಾಯಚೂರಿನಿಂದ ಬೆಂಗಳೂರುವರೆಗೆ ಕರೆದೊಯ್ಯುವ ಕೆಲಸವನ್ನು ಮಾಡುತ್ತಿದ್ದರು ಎಂದು ವಡವಟ್ಟಿ ಗ್ರಾಮದಲ್ಲಿ ಡ್ರೈವರ್ ಕೃಷ್ಣಪ್ಪ ತಾಯಿ ಹನಮಂತಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಕ್ರೂಸರ್ ವಾಹನದಲ್ಲಿ ಸುಮಾರು 23 ಜನರನ್ನು ತುಂಬಿಕೊಂಡು ಬರುತ್ತಿದ್ದಾಗ ಬೆಳಗ್ಗಿನ ಜಾವ 4:30ರ ಸಮಯದಲ್ಲಿ ಶಿರಾ ಬಳಿ ಭೀಕರ ಅಪಘಾತ ಪ್ರಕರಣ ಸಂಭವಿಸಿತ್ತು. ಈ ವೇಳೆ ಡ್ರೈವರ್ ಸೇರಿ ರಾಯಚೂರು ಮೂಲದ ೧೦ ಮಂದಿ ಕೂಲಿ ಕಾರ್ಮಿಕರು ಮೃತಪಟ್ಟಿದ್ದಾರೆ.
ಇದನ್ನೂ ಓದಿ | Tumkur Accident | 3 ವರ್ಷದ ಮಗು ಸೇರಿ 6 ಮಂದಿ ನೇತ್ರದಾನಕ್ಕೆ ಒಪ್ಪಿಗೆ; ನೋವಿನಲ್ಲೂ ಸಾರ್ಥಕತೆ!