ತುಮಕೂರು: ತುಮಕೂರು ತಾಲೂಕಿನ ಊರುಕೆರೆ ಬಳಿಯಿರುವ ಜಿಲ್ಲಾ ಕಾರಾಗೃಹದಲ್ಲಿ (Tumkur Jail) ಲಂಚ ಪಡೆಯುತ್ತಿರುವ ಆರೋಪಗಳು ಕೇಳಿಬಂದಿವೆ. ಜೈಲುವಾಸಿಗಳನ್ನು ನೋಡಲು ಬರುವವರ ಬಳಿ ಸಿಬ್ಬಂದಿ ಹಣ ಪಡೆಯುತ್ತಿದ್ದು, ದುಡ್ಡು ಕೊಟ್ಟರಷ್ಟೇ ಮಾತನಾಡಿಸಲು ಅವಕಾಶ ಕಲ್ಪಿಸಿಕೊಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಜಿಲ್ಲಾ ಕಾರಾಗೃಹದಲ್ಲಿನ ಅವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ, ಕಾನೂನು ಸೇವೆಗಳ ಪ್ರಾಧಿಕಾರ, ಪೊಲೀಸ್ ಎಡಿಜಿಪಿ, ಲೋಕಾಯುಕ್ತ, ಮಾನವ ಹಕ್ಕುಗಳ ಆಯೋಗ ಹಾಗೂ ಗೃಹ ಸಚಿವರಿಗೆ ಜೈಲುವಾಸಿಗಳೇ ದೂರು ಬರೆದಿದ್ದಾರೆ.
ಸುಮಾರು 40ಕ್ಕೂ ಹೆಚ್ಚು ಜೈಲುವಾಸಿಗಳು ದೂರು ನೀಡಿದ್ದು, ನಾಲ್ಕೈದು ಪುಟಗಳಲ್ಲಿ ಬಂಧಿಖಾನೆ ಸಮಸ್ಯೆಗಳ ವಿಸ್ತೃತ ವಿವರಣೆ ನೀಡಿದ್ದಾರೆ. ನಮ್ಮನ್ನು ನೋಡಲು ಬರುವ ಸಂಬಂಧಿಕರ ಬಳಿ ಹಣ ಕೇಳುವುದು ಎಷ್ಟು ಸರಿ? ಅಲ್ಲದೆ, ಅಧೀಕ್ಷಕರು ಕಾರಾಗೃಹದಲ್ಲಿ ಸಮರ್ಪಕವಾಗಿ ಊಟ ನೀಡುತ್ತಿಲ್ಲ ಎಂದೂ ಆರೋಪ ಮಾಡಲಾಗಿದೆ. ಈ ವಿಷಯ ಸಂಬಂಧ ಕಳೆದ ವಾರವಷ್ಟೇ ಜೈಲಿನಲ್ಲಿ ಪ್ರತಿಭಟನೆಯನ್ನೂ ನಡೆಸಿದ್ದರು. ತುಮಕೂರು ಜಿಲ್ಲಾ ಕಾರಾಗೃಹ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಇದನ್ನೂ ಓದಿ | Mild Earthquake : ಸೇಡಂ ತಾಲೂಕಿನ ಕೆಲವು ಕಡೆ ಲಘು ಭೂಕಂಪನ; ಸ್ಥಳೀಯರಲ್ಲಿ ಹೆಚ್ಚಿದ ಆತಂಕ
ಕಳೆದ ವಾರ ಪ್ರತಿಭಟನೆ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ ಕಾರಾಗೃಹಕ್ಕೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಬಂಧಿಖಾನೆಗೆ ಹಿರಿಯ ಅಧಿಕಾರಿಗಳು ಯಾರೇ ಭೇಟಿ ನೀಡಿ ಪರಿಶೀಲನೆಗೆ ಮುಂದಾದರೂ ದೂರು ನೀಡದಂತೆ ಜಿಲ್ಲಾ ಕಾರಾಗೃಹದ ಅಧೀಕ್ಷಕಿ ಶಾಂತಶ್ರೀ ತಾಕೀತು ಮಾಡಿದ್ದಾರೆ ಎಂದೂ ಜೈಲುವಾಸಿಗಳು ಆರೋಪಿಸಿದ್ದಾರೆ.
ದೂರಿನ ಸಾರಾಂಶ
-ಇಲ್ಲಿಗೆ ಭೇಟಿ ನೀಡುವ ಎಲ್ಲ ಉನ್ನತ ಅಧಿಕಾರಿಗಳಿಗೆ ಮಾಸಿಕವಾಗಿ 1 ಲಕ್ಷ, 2 ಲಕ್ಷ ರೂ.ಗಳನ್ನು ಅಧಿಕಾರಿಗಳ ದರ್ಜೆಗೆ ತಕ್ಕಂತೆ ಲಂಚ ನೀಡುತ್ತಿದ್ದೇನೆ ಎಂದು ಹೇಳುವ ಅಧೀಕ್ಷಕಿ ಶಾಂತಶ್ರೀ, ನೀವುಗಳು ಯಾವುದೇ ದೂರು ನೀಡಿದರೂ ಏನೂ ಆಗದು ಎಂದು ಹೇಳುತ್ತಿದ್ದಾರೆ. ಎಲ್ಲ ಅಧಿಕಾರಿಗಳು ಇಲ್ಲಿಗೆ ಬರುವುದು ಮಾಮೂಲಿ, ಲಂಚ ಪಡೆಯಲೇ ಹೊರತು ನಿಮ್ಮ ಯೋಗಕ್ಷೇಮ ವಿಚಾರಿಸಲು ಅಲ್ಲ. ಯಾವನಾದರೂ ದೂರು ನೀಡುವ ಸಾಹಸ ಮಾಡಿದರೆ, ಬಾಲ ಬಿಚ್ಚಿದರೆ ಅಂತಹವರ ಮನೆ ಮಾರಿಸುತ್ತೇನೆ. ಹೆಂಡತಿ ಮಕ್ಕಳನ್ನು ಅಡಮಾನ ಇರಿಸುತ್ತೇನೆ ಎಂದು ಬೆದರಿಸುತ್ತಿದ್ದಾರೆ. ನೀವುಗಳು ಸಾಯುವವರೆಗೂ ಜೈಲಿನಲ್ಲೇ ಕೊಳೆಯವಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಾರೆ. ಹಣ ನೀಡದಿದ್ದರೆ ನಮಗೆ ಮಾನಸಿಕ ಹಿಂಸೆ, ದೌರ್ಜನ್ಯ, ಶೋಷಣೆ ಮಾಡುತ್ತಾರೆ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.
ಕಾರಾಗೃಹದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ. ದೌರ್ಜನ್ಯ, ಹಣ ವಸೂಲಿ, ಲಂಚಗುಳಿತನದ ಬಗ್ಗೆ ಕೈದಿಗಳು ತಮ್ಮ ಹೆಸರು, ನಂಬರ್ ಸಹಿತ ತುಮಕೂರು ಜಿಲ್ಲಾಧಿಕಾರಿ ಸೇರಿದಂತೆ ಹಲವರಿಗೆ ದೂರು ನೀಡಿದ್ದಾರೆ.
ದೂರು ಬರುತ್ತಿದ್ದಂತೆ ನ್ಯಾಯಾಂಗ ವ್ಯವಸ್ಥೆಯ ಅಧಿಕಾರಿಯಾಗಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಅವರು ಕಾರಾಗೃಹಕ್ಕೆ ಭೇಟಿ ನೀಡಿದ್ದು, ಬಂಧಿಖಾನೆಯನ್ನು ಪರಿಶೀಲನೆ ಮಾಡಿದ್ದಾರೆ. ಅಲ್ಲದೆ, ಕೈದಿಗಳ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | Black Magic : ಕೊಡಗಿನ ದಟ್ಟಾರಣ್ಯದ ಮಧ್ಯೆ ವಾಮಾಚಾರ; ಬೆಟ್ಟತ್ತೂರು ಗ್ರಾಮದಲ್ಲಿ ಕೋಳಿ ಬಲಿ, ಗ್ರಾಮಸ್ಥರಲ್ಲಿ ಆತಂಕ