ಗುಬ್ಬಿ: ತಾಲೂಕಿನ ಸಿ.ಎಸ್. ಪುರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಕಾಲಕ್ಕೆ ಸೂಕ್ತ ಚಿಕಿತ್ಸೆ (Treatment) ದೊರೆಯದೇ ಐದು ವರ್ಷದ ಬಾಲಕಿ (5 year old girl) ಮೃತಪಟ್ಟಿದ್ದಾಳೆ ಎಂದು ಪೋಷಕರು ಆರೋಪಿಸಿದ್ದಾರೆ.
ತನ್ವಿತ (5) ಮೃತ ಬಾಲಕಿ. ತಾಲೂಕಿನ ಸಿ.ಎಸ್. ಪುರ ಹೋಬಳಿಯ ವೆಂಕಟೇಗೌಡನ ಪಾಳ್ಯದ ಸತೀಶ್ ಹಾಗೂ ಶಿಲ್ಪ ದಂಪತಿಯ ಪುತ್ರಿ ತನ್ವಿತಾಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮಂಗಳವಾರ ರಾತ್ರಿ 1 ಗಂಟೆ ಸಮಯದಲ್ಲಿ ಸಿ ಎಸ್ ಪುರ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇರದೆ, ಸಕಾಲದಲ್ಲಿ ಚಿಕಿತ್ಸೆ ಲಭ್ಯವಾಗಿಲ್ಲ, ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿ ಮಗುವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸೂಚಿಸಿದ್ದ ಹಿನ್ನೆಲೆಯಲ್ಲಿ ಖಾಸಗಿ ವಾಹನದಲ್ಲಿ ಗುಬ್ಬಿಗೆ ತರುವ ಮಾರ್ಗ ಮಧ್ಯೆ ಮಗು ಮೃತಪಟ್ಟಿದೆ ಎಂದು ಪೋಷಕರು ತಿಳಿಸಿದ್ದಾರೆ.
24×7 ಆಸ್ಪತ್ರೆಯಲ್ಲಿ ರಾತ್ರಿ ವೇಳೆಯಲ್ಲಿ ಯಾವ ವೈದ್ಯರೂ ಕರ್ತವ್ಯ ನಿರ್ವಹಿಸುತ್ತಿಲ್ಲ. ಆಂಬುಲೆನ್ಸ್ ಇದ್ದರೂ ಸೇವೆ ಲಭ್ಯವಾಗದ ಕಾರಣ ಮಗುವಿಗೆ ಸಕಾಲದಲ್ಲಿ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿಲ್ಲ ಎಂದು ಪೋಷಕರು ದೂರಿದ್ದಾರೆ.
ಸಕಾಲದಲ್ಲಿ ಚಿಕಿತ್ಸೆ ದೊರಕಿದ್ದರೆ ತಮ್ಮ ಮಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಇದ್ದ ಒಬ್ಬ ಮಗಳನ್ನು ಕಳೆದುಕೊಂಡಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕಿದರು.
ಇದನ್ನೂ ಓದಿ: Railway Bridge Collapse : ಕಾರ್ಮಿಕರ ಮೇಲೆ ಕುಸಿದ ರೈಲ್ವೆ ಸೇತುವೆ; ಭೀಕರ ದುರಂತ
ವೈದ್ಯರು ಯಾವಾಗ ಬಂದು ಹೋಗುವರೊ ಒಂದೂ ತಿಳಿಯದಾಗಿದೆ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಕೇವಲ ಶುಶ್ರೂಷಕಿ ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ಸಣ್ಣಪುಟ್ಟ ಚಿಕಿತ್ಸೆಗೂ ತಾಲೂಕು ಅಥವಾ ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ ಎಂದು ಯುವ ಮುಖಂಡ ರಂಗಣ್ಣ ಆರೋಪಿಸಿದ್ದಾರೆ.