ಬೆಂಗಳೂರು: ಭಾರತೀಯ ಸೇನೆಯ ಇಬ್ಬರು ಅಧಿಕಾರಿಗಳು ಬೆಂಗಳೂರು ಏರ್ಪೋರ್ಟ್(Bengaluru Airport)ನಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸೇವಾ ಸಿಬ್ಬಂದಿಯೊಂದಿಗೆ ಜಗಳ ತೆಗೆದು, ಅವರನ್ನು ಥಳಿಸಿ ಉದ್ವಿಗ್ನತೆ ಸೃಷ್ಟಿಸಿದ್ದಾರೆ. ಇವರಿಬ್ಬರೂ ಪಾನಮತ್ತರಾಗಿದ್ದರು. ತಮ್ಮ ಕಾರನ್ನು ವಿಐಪಿ ಲೇನ್ (ಏರ್ಪೋರ್ಟ್ನಲ್ಲಿ ಗಣ್ಯರಿಗೆ ಮೀಸಲಿಡುವ ಮಾರ್ಗ)ನಲ್ಲಿ ಬಿಡುವಂತೆ ಅಲ್ಲಿನ ಭದ್ರತಾ ಸಿಬ್ಬಂದಿಗೆ ಒತ್ತಾಯಿಸಿದ್ದಾರೆ. ಅವರು ಒಪ್ಪದಿದ್ದಾಗ ಕ್ಯಾತೆ ತೆಗೆದು, ಅವರಿಗೆ ಹೊಡೆದಿದ್ದಾರೆ. ಇವರಿಬ್ಬರನ್ನೂ ವಿರುದ್ಧ ಬೆದರಿಕೆ ಹಾಕಿದ ಮತ್ತು ಹಲ್ಲೆ ಮಾಡಿದ ಆರೋಪದಡಿ ಬಂಧಿಸಲಾಗಿತ್ತು. ನಂತರ ಜಾಮೀನಿನ ಆಧಾರದ ಮೇಲೆ ಬಿಡುಗಡೆ ಮಾಡಲಾಗಿದೆ.
ಬೆಂಗಳೂರಿನ ಕೆಂಪೇಗೌಡ ಏರ್ಪೋರ್ಟ್ನಲ್ಲಿ ಶುಕ್ರವಾರ ಮುಂಜಾನೆಯೇ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಸೇನಾಧಿಕಾರಿಗಳಾದ ಠಾಕೂರ್ ಬರುವಾರ್ ಮತ್ತು ಪಿಯೂಷ್ ರಜಪೂತ್ ಹೀಗೆ ಗಲಾಟೆ ಸೃಷ್ಟಿಸಿದ್ದರು. ಇವರಿಬ್ಬರಿಗೂ 31ವರ್ಷ ವಯಸ್ಸಾಗಿದ್ದು, ಬರುವಾರ್ ಕ್ಯಾಪ್ಟನ್, ಮತ್ತು ಪಿಯೂಷ್ ರಜಪೂತ್ ಮೇಜರ್ ಶ್ರೇಣಿಯ ಅಧಿಕಾರಿಗಳಾಗಿದ್ದಾರೆ. ಜಮ್ಮು-ಕಾಶ್ಮೀರದ ನೋಂದಣಿ ಸಂಖ್ಯೆ ಇರುವ ಕಾರಿನಲ್ಲಿ, ಸಿವಿಲ್ ಉಡುಗೆಯಲ್ಲಿ (ಸಮವಸ್ತ್ರವಲ್ಲದ ಸಾದಾ ಉಡುಪು) ಬಂದಿದ್ದ ಇವರು ತಮ್ಮ ವಾಹನವನ್ನು ಒಮ್ಮೆಲೇ ವಿಐಪಿ ಲೇನ್ಗೆ ಬಂದಿದ್ದಾರೆ. ಆಗ ಅಲ್ಲಿದ್ದ ಖಾಸಗಿ ಸೆಕ್ಯೂರಿಟಿ ಗಾರ್ಡ್ ಸೇನಾಧಿಕಾರಿಗಳನ್ನು ತಡೆದಿದ್ದಾನೆ. ‘ಇಲ್ಲಿ ಗಣ್ಯರು ಮತ್ತು ಸಿಐಎಸ್ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ)ನ ವಾಹನಗಳು ಮಾತ್ರ ಹೋಗಬಹುದು’ ಎಂದಿದ್ದಾನೆ. ಆಗ ಇಬ್ಬರೂ ಅಧಿಕಾರಿಗಳು ಕಾರಿನಿಂದ ಇಳಿದು, ಆತನ ಮೇಲೆ ವಿಪರೀತ ಕೂಗಾಡಿದ್ದಾರೆ. ‘ನಮ್ಮನ್ನು ಯಾರು ಅಂದುಕೊಂಡೆ, ನಾವಿಬ್ಬರೂ ಸೇನಾಧಿಕಾರಿಗಳು. ನಮ್ಮನ್ನೂ ಈ ವಿಐಪಿ ಮಾರ್ಗದಲ್ಲಿಯೇ ಬಿಡಬೇಕು’ ಎಂದು ರೇಗಿದ್ದಾರೆ.
ಹಾಗಿದ್ದಾಗ್ಯೂ ಸೆಕ್ಯೂರಿಟಿ ಗಾರ್ಡ್ ತನ್ನ ಪಟ್ಟು ಬಿಡಲಿಲ್ಲ. ಕಾರಿಗೆ ಅಡ್ಡಲಾಗಿ ನಿಂತೇ ಇದ್ದ. ಆಗ ಕೋಪಗೊಂಡ ಕ್ಯಾಪ್ಟನ್ ಬರುವಾರ್ ಮೊದಲು ಸೆಕ್ಯೂರಿಟಿ ಗಾರ್ಡ್ಗೆ ಥಳಿಸಿದ್ದಾರೆ. ಬಳಿಕ ರಜಪೂತ್ ಮತ್ತು ಬರುವಾರ್ ಇಬ್ಬರೂ ಸೇರಿ ಭದ್ರತಾ ಸಿಬ್ಬಂದಿಗೆ ಒದ್ದು, ಹೊಡೆದಿದ್ದಾರೆ. ಏರ್ಪೋರ್ಟ್ನಲ್ಲಿ ಇದ್ದ ಇನ್ನಿತರ ಸೆಕ್ಯೂರಿಟಿ ಸಿಬ್ಬಂದಿ ಈ ದೃಶ್ಯ ನೋಡಿ ಅಲ್ಲಿಗೆ ಓಡಿ ಬಂದಿದ್ದಾರೆ. ಆಗ ಸೇನಾಧಿಕಾರಿಗಳು ಅವರಿಗೂ ಹೊಡೆದಿದ್ದಾರೆ. ಒಟ್ಟಾರೆ ಸ್ಥಳದಲ್ಲಿ ದೊಡ್ಡ ಉದ್ವಿಗ್ನತೆಯನ್ನೇ ಸೃಷ್ಟಿಸಿ, ಅಶಿಸ್ತು ತೋರಿಸಿದ್ದಾರೆ.
ಅಲ್ಲಿಗೆ ಬಂದ ಕೆಂಪೇಗೌಡ ಏರ್ಪೋರ್ಟ್ ಪೊಲೀಸರು ಈ ಇಬ್ಬರನ್ನೂ ಕಸ್ಟಡಿಗೆ ಪಡೆದರು. ಆದರೆ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಹೋಗಿ, ಪೊಲೀಸ್ ವಾಹನವನ್ನೂ ದಾಟಿಕೊಂಡು ಹೋಗಿ ಸೆಕ್ಯೂರಿಸಿ ಸಿಬ್ಬಂದಿಗೆ ಮತ್ತೆ ಹೊಡೆದಿದ್ದಾರೆ. ನಂತರ ಪೊಲೀಸರು ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ‘ಈ ಇಬ್ಬರೂ ಸೇನಾಧಿಕಾರಿಗಳೂ ನಂದಿಬೆಟ್ಟದ ಬಳಿ ಪಾರ್ಟಿಯೊಂದರಲ್ಲಿ ಪಾಲ್ಗೊಂಡಿದ್ದರು. ಅವರು ಏರ್ಪೋರ್ಟ್ಗೆ ಬಂದಿದ್ದು ಮುಂಜಾನೆ ಕಾಫಿ ಕುಡಿಯಲು’ ಎಂಬ ವಿಚಾರ ಗೊತ್ತಾಗಿದೆ. ಅದೇನೇ ಇದ್ದರೂ ಇವರಿಬ್ಬರ ಥಳಿತದಿಂದ ಏರ್ಪೋರ್ಟ್ನ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕಳಿಸಲಾಗಿದೆ. ಸೇನಾಧಿಕಾರಿಗಳು ಬೇಲ್ ಪಡೆದು ಬಿಡುಗಡೆಯಾಗಿದ್ದಾರೆ.
ಇದನ್ನೂ ಓದಿ: ಏರ್ಪೋರ್ಟ್ನಲ್ಲಿ ಎಟಿಸಿ ರೂಮಿಗೇ ನುಗ್ಗಿದ ಬಿಜೆಪಿ ಸಂಸದರು; ಏಳು ಮಂದಿ ವಿರುದ್ಧ ಎಫ್ಐಆರ್ ದಾಖಲು