ಯಲ್ಲಾಪುರ : ತಾಲೂಕಿನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಬ್ಬರು ರಾಷ್ಟ್ರಮಟ್ಟದ ಕೂಟವೊಂದರಲ್ಲಿ ಭಾಗವಹಿಸಲಿರುವ ಕರ್ನಾಟಕ ಕಬಡ್ಡಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಮಂಡ್ಯದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಉತ್ತರ ಕನ್ನಡ ಜಿಲ್ಲಾ ತಂಡದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಾಗಿದ್ದ ಜಾನು ಗಾವಡೆ ಹಾಗೂ ರಾಜು ಜಾನು ಸಿಂಧೆ ರಾಷ್ಟ್ರಮಟ್ಟದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಪಟ್ಟಣದ ವೈ.ಟಿ.ಎಸ್.ಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಜಾನು ಗಾವಡೆ ಮೂಲತ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ನಿವಾಸಿಯಾಗಿದ್ದು ಬಮ್ಮು ಬಾವಡಿ-ಧೋಂಡು ಬಾಯಿ ಪುತ್ರ. ಇನ್ನೊಬ್ಬ ವಿದ್ಯಾರ್ಥಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಜು ಜಾನು ಸಿಂಧೆ ತಾಲೂಕಿನ ಕಿರವತ್ತಿ ಗ್ರಾಮದ ಜೋಗಿಕೊಪ್ಪ ನಿವಾಸಿಯಾಗಿದ್ದು, ತಾಯಿ ಜಾನು ಸಿಂಧೆ ಕೂಲಿ ಕೆಲಸ ಮಾಡುತ್ತಾರೆ. ಅವರು ವಿಠ್ಠು ಶೆಳಕೆ ಅವರಿಂದ ತರಬೇತಿಯನ್ನು ಪಡೆದಿದ್ದಾರೆ.
ನವೆಂಬರ್ 24 ಹಾಗೂ 25ರಂದು ಮಂಡ್ಯದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕ್ರೀಡಾಕೂಟದ ಕಬಡ್ಡಿ ಪಂದ್ಯಾವಳಿಯಲ್ಲಿ ಈ ವಿದ್ಯಾರ್ಥಿಗಳನ್ನೊಳಗೊಂಡಿದ್ದ ಉತ್ತರ ಕನ್ನಡ ತಂಡವು ದ್ವಿತೀಯ ಸ್ಥಾನ ಪಡೆದಿತ್ತು. ಈ ಎರಡೂ ವಿದ್ಯಾರ್ಥಿಗಳ ಆಟದ ಶೈಲಿಯನ್ನು ಮೆಚ್ಚಿ ರಾಜ್ಯ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಪಂಜಾಬ್ ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ | Video | ಯುವತಿಯರೊಂದಿಗೆ ಕುಣಿಗಲ್ ಶಾಸಕ ಡಾ. ರಂಗನಾಥ್ ಕಬಡ್ಡಿ ಆಟ!