ಶಿವಮೊಗ್ಗ: ನರ್ಸರಿಯೊಂದಕ್ಕೆ ಬಂದಿದ್ದ ಹಾವಿನ ಮರಿಯನ್ನು ಹಿಡಿಯಲು ಉರಗ ತಜ್ಞರನ್ನು ಕರೆಸಿಕೊಂಡರೆ ಅಲ್ಲಿದ್ದ ಕಾರ್ಮಿಕರು ಹಾವಿನಂತೆ ಹೊರಳಾಡಿ ಪ್ರತಿಭಟಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಚೌಡೇಶ್ವರಿ ಕಾಲೊನಿಯಲ್ಲಿ ಶಂಕರ್ ರೇಂಜ್ ಎಂಬ ನರ್ಸರಿ ಇದೆ. ಅಲ್ಲಿ ಒಂದು ನಾಗರ ಹಾವಿನ ಮರಿ ಕಾಣಿಸಿಕೊಂಡಿತ್ತು. ನರ್ಸರಿ ಮಾಲೀಕರು ಕೂಡಲೇ ಪ್ರಸಿದ್ಧ ಉರಗ ತಜ್ಞ ಸ್ನೇಕ್ ಕಿರಣ್ ಅವರನ್ನು ಕರೆಸಿಕೊಂಡರು.
ಸ್ನೇಕ್ ಕಿರಣ್ ಅವರಿಗೆ ಹಾವುಗಳೇನೂ ಹೊಸದಲ್ಲ. ದೊಡ್ಡ ದೊಡ್ಡ ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟ ಹಿನ್ನೆಲೆ ಅವರಿಗಿದೆ. ಅವರಿಗೆ ಈ ಸಣ್ಣ ಮರಿ ದೊಡ್ಡ ಸಂಗತಿಯೇನೂ ಆಗಿರಲಿಲ್ಲ. ಕೂಡಲೇ ಅವರು ಹಾವನ್ನು ಹಿಡಿದೇ ಬಿಟ್ಟರು. ಆದರೆ, ಅಷ್ಟು ಹೊತ್ತಿಗೆ ಅಲ್ಲಿ ಅಚಾನಕ್ಕಾದ ಘಟನೆಯೊಂದು ನಡೆದು ಹೋಯಿತು.
ಅಲ್ಲಿ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ವಾಸುಕಿ ಮತ್ತು ನೇತ್ರಾ ಎಂಬ ಇಬ್ಬರು ಮಹಿಳಾ ಕಾರ್ಮಿಕರು ಹಾವಿನಂತೆ ಹರಿದಾಡಲು ಶುರು ಮಾಡಿದರು. ಮೊದಲು ನಾಗಿಣಿ ನೃತ್ಯ ಶುರು ಮಾಡಿದ ಅವರು ಬಳಿಕ ಬೊಬ್ಬೆ ಹಾಕಲು ಶುರು ಮಾಡಿದರು. ಒಬ್ಬಳಂತೂ ನೆಲದಲ್ಲಿ ಬಿದ್ದು ಹಾವಿನಂತೆ ಹರಿಯತೊಡಗಿದಳು. ಮತ್ತೊಬ್ಬಳು ʻʻನಾನು ಬಂದಿರೋದು ನಿಮ್ಮನ್ನು ಕಾವಲು ಕಾಯಲು ಅಲ್ವಾ? ನನ್ನನ್ನು ಹೊರಗೆ ಕಳುಹಿಸುತ್ತೀರಾ?ʼ ಎಂದೆಲ್ಲ ಕೇಳತೊಡಗಿದಳು.
ಆಗ ಅಲ್ಲಿದ್ದವರೆಲ್ಲ ಮಹಿಳೆಯರ ಬಳಿಗೆ ಹೋದರು. ಕೆಲವರು ಹಾವನ್ನು ಬಿಟ್ಟುಬಿಡಿ ಎಂದರು. ಅದಕ್ಕೆ ಸ್ನೇಕ್ ಕಿರಣ್ ಅವರು ʻಈ ತರ ಏನೂ ಆಗಲ್ಲʼ ಎಂದು ತಮ್ಮ ಅನುಭವದ ಮಾತು ಹೇಳಿದರು. ಕೊನೆಗೆ ನಾಗಿಣಿ ನೃತ್ಯ, ಹೊರಳಾಟ ಜಾಸ್ತಿ ಆದಾಗ ಅಲ್ಲಿದ್ದವರೇ ಹಿಡಿದ ಹಾವನ್ನು ಅಲ್ಲೆ ಸ್ವಲ್ಪ ದೂರದಲ್ಲಿ ಬಿಟ್ಟು ಬಿಡಿ ಎಂದರು. ಕೊನೆಗೆ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದುಕೊಂಡು ದೂರ ಹೋದರು. ಅಷ್ಟು ಹೊತ್ತಿಗೆ ಮಹಿಳೆಯರು ನಿಧಾನಕ್ಕೆ ಸಹಜ ಸ್ಥಿತಿಗೆ ಬಂದರು.