Site icon Vistara News

Actress Prema | ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡ ನಟಿ ಪ್ರೇಮಾ

Actress Prema

ಉಡುಪಿ: ಖ್ಯಾತ ಚಿತ್ರ ನಟಿ, ಹೆಚ್ಚು ಕಡಿಮೆ ಒಂದು ದಶಕದ ಕಾಲ ಸ್ಯಾಂಡಲ್‌ವುಡ್‌ನಲ್ಲಿ ಹವಾ ಎಬ್ಬಿಸಿದ್ದ ಕೊಡಗಿನ ಬೆಡಗಿ ಪ್ರೇಮಾ (Actress Prema) ಅವರು ತಮಗೆ ಕಂಕಣ ಭಾಗ್ಯ ಕರುಣಿಸುವಂತೆ ಕೊರಗಜ್ಜನಲ್ಲಿ ಬೇಡಿಕೊಂಡಿದ್ದಾರೆ.

ಅವರು ತಮ್ಮ ಕುಟುಂಬದ ಬಂಧುಗಳ ಸಮೇತ ಉಡುಪಿ ಜಿಲ್ಲೆಯ ಕಾಪು ಕೊರಗಜ್ಜ ಸನ್ನಿಧಿಗೆ ಆಗಮಿಸಿ ಅಲ್ಲಿ ಕೊರಗಜ್ಜನ ಮುಂದೆ ತಮ್ಮ ಕೋರಿಕೆಯನ್ನು ಹೇಳಿಕೊಂಡರು. ʻʻಈಗಾಗಲೇ ವರನನ್ನು ನೋಡಿದ್ದೇವೆ, ಅದೇ ವರನನ್ನು ಮದುವೆ ಆಗುವಂತೆ ಆಶೀರ್ವಾದ ಮಾಡಿʼʼ ಎಂದು ಕೊರಗಜ್ಜನ ಮುಂದೆ ಪ್ರೇಮಾ ಪ್ರಾರ್ಥನೆ ಸಲ್ಲಿಸಿದರು. ಇದೀಗ ಈ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಉಡುಪಿಗೆ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ನಟಿ ಪ್ರೇಮಾ ಕಾಪು ಕೊರಗಜ್ಜ ಸನ್ನಿಧಿಗೆ ತೆರಳಿದ್ದರು. ಅಲ್ಲಿ ಭಕ್ತಿಯಿಂದ ಸನ್ನಿಧಾನದ ಮುಂದೆ ನಿಂತು ತಮ್ಮ ಹೃದಯದ ಆಸೆಯನ್ನು ಹೇಳಿಕೊಂಡರು. ಅವರೇ ಹೇಳಿಕೊಂಡಿರುವ ಪ್ರಕಾರ, ಪ್ರೇಮಾ ಅವರಿಗೆ ಈಗಾಗಲೇ ವರನನ್ನು ನೋಡಲಾಗಿದೆ. ಅವರ ಗುಣಗಳು ಪ್ರೇಮಾ ಅವರಿಗೆ ಇಷ್ಟವಾಗಿವೆ. ಹೀಗಾಗಿ ಅವರ ಜತೆಗೇ ಮದುವೆಯಾಗಬೇಕು ಮತ್ತು ಮುಂದಿನ ಜೀವನಕ್ಕೆ ಆಶೀರ್ವಾದ ಮಾಡುವಂತೆ ಕೊರಗಜ್ಜನಲ್ಲಿ ಪ್ರಾರ್ಥಿಸಿದ್ದಾರೆ. ಅವರ ಜತೆ ಅನು ಅಯ್ಯಪ್ಪ ಮತ್ತು ಇತರ ಬಂಧುಗಳು ಇದ್ದರು. ಕುಟುಂಬ ಹಲವು ದೇವಸ್ಥಾನ, ದೈವಸ್ಥಾನಗಳಿಗೆ ಭೇಟಿ ನೀಡಿದೆ.

ಅದ್ಭುತ ನಟಿಯ ವೈಭವ, ಸಂಕಟದ ಬದುಕು
ಶಿವರಾಜ್ ಕುಮಾರ್ ಅಭಿನಯದ ‘ಸವ್ಯಸಾಚಿ’ ಎಂಬ ಚಿತ್ರದ ಮೂಲಕ 1996ರಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದ ಪ್ರೇಮಾ ಅವರು ಕನ್ನಡದಲ್ಲಿ 50 ಸಿನಿಮಾ, ತೆಲುಗು 25, ತಮಿಳು 1 ಹಾಗೂ ಮಲಯಾಳಂನ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಿವರಾಜ್‌ ಕುಮಾರ್‌ ಜತೆಗಿನ ಓಂ ಚಿತ್ರ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿತು. ‘ನಮ್ಮೂರ ಮಂದಾರ ಹೂವೇ’ ಸಿನಿಮಾದಲ್ಲಿ ರಮೇಶ್ ಅರವಿಂದ್, ಶಿವರಾಜ್‌ಕುಮಾರ್, ಪ್ರೇಮಾ ಅವರ ಅಭಿನಯ ಎಂದೂ ಮರೆಯಲಾಗದ್ದು. ಚಂದ್ರಮುಖಿ ಪ್ರಾಣಸಖಿ, ಕನಸುಗಾರ ಮೊದಲಾದ ಚಿತ್ರಗಳು ಪ್ರೇಮಾ ಅವರನ್ನು ಮಹಾ ನಟಿಯಾಗಿ ರೂಪಿಸಿದವು.

ಸುಮಾರು ಒಂದು ದಶಕಗಳ ಕಾಲ ಸ್ಯಾಂಡ್‌ವುಡ್‌ನಲ್ಲಿ ಹವಾ ಸೃಷ್ಟಿಸಿದ್ದ ಅವರಿಗೆ ೨೦೦೬ರಲ್ಲಿ ಉದ್ಯಮಿ ಜೀವನ್‌ ಅಪ್ಪಚ್ಚು ಅವರೊಂದಿಗೆ ಮದುವೆಯಾಗಿತ್ತು. ಆದರೆ, ಯಾವುದೋ ಕಾರಣಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡಿದ್ದು ಕಳೆದ ಕೆಲವು ವರ್ಷಗಳಿಂದ ಪ್ರೇಮ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

ಈ ನಡುವೆ, ಪ್ರೇಮಾ ಅವರ ಕೂದಲು ಉದುರಿದ್ದು, ಅದನ್ನು ಗಮನಿಸಿದ ಕೆಲವರು ಅವರಿಗೆ ಕ್ಯಾನ್ಸರ್‌ ರೋಗದ ಸಮಸ್ಯೆ ಇದೆ ಎಂದು ಹೇಳಿದ್ದರು. ಆದರೆ, ಮುಂದೆ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತನಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ ಎಂದು ಹೇಳಿಕೊಂಡಿದ್ದರು. ಇದೇ ವೇಳೆ ವೈವಾಹಿಕ ಜೀವನದ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದಿದ್ದರು. ಈ ನಡುವೆ ನಟಿ ಪ್ರೇಮಾ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್‌ನಲ್ಲಿ ಕೆಲವು ಸಮಯ ಕಾಲ ಕಳೆದಿದ್ದರು.

ಇದನ್ನೂ ಓದಿ | Vasishta Simha | ನಟ ಪ್ರಭುದೇವ 60ನೇ ಸಿನಿಮಾದಲ್ಲಿ ನಟ ವಸಿಷ್ಠ ಸಿಂಹ!

Exit mobile version