Site icon Vistara News

Chief Minister Tour | ಸಿಎಂ ಬೊಮ್ಮಾಯಿ ಉತ್ತರ ಕನ್ನಡ ಜಿಲ್ಲಾ ಪ್ರವಾಸ ರದ್ದು

ಬೊಮ್ಮಾಯಿ

ಉಡುಪಿ: ಮಳೆ ಹಾನಿ ಪರಿಶೀಲನೆ ಹಿನ್ನೆಲೆಯಲ್ಲಿ ಜುಲೈ 13ರಂದು ನಿಗದಿಯಾಗಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಉತ್ತರ ಕನ್ನಡ ಜಿಲ್ಲೆ ಪ್ರವಾಸ ರದ್ದಾಗಿದೆ. ಭಟ್ಕಳ ತಾಲೂಕಿನ ಗೊರಟೆ ಗ್ರಾಮದಲ್ಲಿ ಕಡಲ್ಕೊರೆತ ಸ್ಥಳಕ್ಕೆ ಭೇಟಿ ನೀಡಿ ಮಳೆ ಹಾನಿ ಪರಿಶೀಲನೆ ಬಳಿಕ ಮುರ್ಡೇಶ್ವರದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಿಗದಿಯಾಗಿತ್ತು. ಆದರೆ‌, ಕಾರಣಾಂತರಗಳಿಂದ ಮುಖ್ಯಮಂತ್ರಿಗಳ ಪ್ರವಾಸ ರದ್ದಾಗಿದ್ದು, ಮುಂದಿನ ವಾರ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ಬೆಳಗಾವಿ ಮತ್ತು ಉತ್ತರ ಕನ್ನಡ ಜಿಲ್ಲೆಗೆ ಹತ್ತು ದಿನ ಬಿಟ್ಟು ಭೇಟಿ ನೀಡಿ, ನೆರವು ಮತ್ತು ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಪ್ರವಾಸ ಮಾಡಿದ್ದೇನೆ. ಅಲ್ಲಿ ಭೂಕಂಪನ ಮತ್ತು ಭೂಕುಸಿತ ಸ್ಥಳಗಳ ಪರಿಶೀಲನೆ ನಡೆಸಿದ್ದೇನೆ. ಈ ಬಗ್ಗೆ ಅಧ್ಯಯನ ಮಾಡಲು 4 ಸಂಸ್ಥೆಗಳಿಗೆ ಸೂಚನೆ ಕೊಟ್ಟಿದ್ದೇನೆ. ಕಡಲು ಕೊರೆತ ತಡೆಯಲು ಹೊಸ ತಂತ್ರಜ್ಞಾನದ ಅಳವಡಿಸಲು ತೀರ್ಮಾನಿಸಲಾಗುವುದು. ಉಡುಪಿಯಲ್ಲಿ ಕರಾವಳಿಯ ಮೂರು ಜಿಲ್ಲೆಗಳ ಅಧಿಕಾರಿಗಳ ಸಭೆ ನಡೆಸಿ, ಹಾನಿಯ ಬಗ್ಗೆ ಸಮಗ್ರ ಚರ್ಚೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಉಡುಪಿಯಲ್ಲಿ ಕರಾವಳಿ ಜಿಲ್ಲೆಗಳ ಅಧಿಕಾರಿಗಳ ಸಭೆ

ಉಡುಪಿ ಜಿಲ್ಲಾಧಿಕಾರಿ ಕಚೇರಿ ರಜತಾದ್ರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಭೆಯಲ್ಲಿ ಸಚಿವ ಆರ್‌.ಅಶೋಕ್, ಸುನೀಲ್ ಕುಮಾರ್, ಉಡುಪಿ ಉಸ್ತುವಾರಿ ಸಚಿವ ಎಸ್.ಅಂಗಾರ, ಸಚಿವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಜಿಲ್ಲೆಯ ಐದು ಶಾಸಕರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ತುರ್ತು ಮತ್ತು ದೀರ್ಘಕಾಲೀನ ಸಮಸ್ಯೆಗಳ ಪರಿಹಾರದ ಬಗ್ಗೆ ಚರ್ಚೆ ನಡೆಸಲಾಗುತ್ತದೆ. ಬಳಿಕ ಸಿಎಂ ಬೈಂದೂರು ಮತ್ತು ಕಾಪು ತಾಲೂಕಿಗೆ ಭೇಟಿ ಕೊಡಲಿದ್ದಾರೆ.
ಇದಕ್ಕೂ ಮುನ್ನಾ ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದ ಸಿಎಂ ಬೊಮ್ಮಾಯಿ ಅವರು ಮಂಗಳವಾರ ಸಂಜೆ ಉಡುಪಿಯ ಮಣಿಪಾಲದಲ್ಲಿ ವಾಸ್ತವ್ಯ ಹೂಡಿದ್ದರು.

ಇದನ್ನೂ ಓದಿ | Weather Report | ರಾಜ್ಯಾದ್ಯಂತ ಮುಂದಿನ 24 ಗಂಟೆ ಭಾರಿ ಮಳೆ ಮುನ್ಸೂಚನೆ

ಮಂಗಳವಾರ ವಿವಿಧೆಡೆ ಮಳೆ ಹಾನಿ ಪರಿಶೀಲನೆ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಹೊರವಲಯದ ಬಟ್ಟಪಾಡಿ ಕಡಲ್ಕೊರೆತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಹಾನಿಯನ್ನು ಪರಿಶೀಲಿಸಿದ್ದೇನೆ. ದಕ್ಷಿಣ ಕನ್ನಡದ ಸುಳ್ಯದಲ್ಲಿ ಭೂ ಕಂಪನದಿಂದ ಹಾನಿಯಾದ ಮನೆಯನ್ನೂ ವೀಕ್ಷಿಸಿದ್ದೇನೆ. ಭೂ ಕಂಪನದಿಂದ ಬಹಳ ತೊಂದರೆಯಾಗಿದೆ ಎಂದು ತಿಳಿಸಿದರು.

ಉಪ್ಪಿನಂಗಡಿಯಲ್ಲಿ ನದಿಗಳ ಸಂಗಮ ಪ್ರದೇಶದಲ್ಲಿ ತೋಟಗಳಿಗೆ ಹಾನಿ ಆಗಿದ್ದು, ಉಳ್ಳಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ಕಡಲ್ಕೊರೆತ ಆಗಿದೆ. ಈ ಬಾರಿ‌ 600 ಮೀ. ಕಡಲ್ಕೊರೆತ ಆಗಿದೆ. ಕರಾವಳಿಯ ಮೂರೂ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಕಡಲ್ಕೊರೆತ ಸಮಸ್ಯೆ ಇದೆ. ಕಡಲ್ಕೊರೆತ ತಡೆಗೆ ಎಡಿಬಿ ಕೆಲಸ ಸರಿಯಾಗಿಲ್ಲ ಎಂಬ ಆರೋಪವಿದ್ದು, ಹೊಸ ತಂತ್ರಜ್ಞಾನವನ್ನು ಈ ಪ್ರದೇಶದಲ್ಲೇ ಅಳವಡಿಸಲು ಅನುಮತಿ ನೀಡಲಾಗಿದೆ. ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನ ಬಟ್ಟಪಾಡಿಯಲ್ಲೇ ಜಾರಿ ಮಾಡಲಿದ್ದು, ರಸ್ತೆ ಸಂಪರ್ಕ ಕಡಿತ ಆದಲ್ಲಿ ತಾತ್ಕಾಲಿಕವಾಗಿ ಜನರ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗುವುದು. ದೀರ್ಘ ಕಾಲದ ಯೋಜನೆ ಜಾರಿ ಮಾಡುವ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಭೂ ಕಂಪನದ ಬಗ್ಗೆ ಅಧ್ಯಯನಕ್ಕೆ ತಜ್ಞರಿಗೆ ಸೂಚಿಸಲಾಗಿದೆ. ಅವರು ಅಧ್ಯಯನ ಮಾಡಿ‌ ವರದಿ ನೀಡಿದ ಬಳಿಕ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಸಮುದ್ರದ ಪಕ್ಕದಲ್ಲಿ ಅಪಾಯದಲ್ಲಿರುವ ಮನೆಯವರನ್ನು ಸ್ಥಳಾಂತರ ಮಾಡುವ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ | ಉಡುಪಿ ಜಿಲ್ಲೆಯ ನೆರೆಪೀಡಿತ ಭಾಗಗಳಿಗೆ ಸಿಎಂ ಬೊಮ್ಮಾಯಿ ಭೇಟಿ, ಸಭೆ

Exit mobile version