Site icon Vistara News

Dr HS Shetty: ಪೇಜಾವರ ಶ್ರೀಗಳ ಆಶಯದಂತೆ ಬಡವರಿಗೆ ಮನೆ ನಿರ್ಮಾಣ: ಡಾ.ಎಚ್.ಎಸ್. ಶೆಟ್ಟಿ

Construction of houses for the poor as per the wishes of Pejawar Seer says Dr. H.S. Shetty

ಉಡುಪಿ: ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ಜಿಲ್ಲೆಯ ಜನ್ನಾಡಿ ಕೊರಗರ ಕಾಲೊನಿಯಲ್ಲಿ ಬಡವರಿಗಾಗಿ 15 ಮನೆಗಳ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಲಾಯಿತು. ಸೊಸೈಟಿ ಅಧ್ಯಕ್ಷ ಹಾಗೂ ಉದ್ಯಮಿ ಡಾ.ಎಚ್.ಎಸ್. ಶೆಟ್ಟಿ (Dr HS Shetty) ಅವರ ನೇತೃತ್ವದಲ್ಲಿ ಕೈಗೊಂಡಿರುವ ಮನೆಗಳ ನಿರ್ಮಾಣ ಕಾಮಗಾರಿಗೆ ಉಡುಪಿ ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಭೂಮಿಪೂಜೆ ಮತ್ತು ಶಿಲಾನ್ಯಾಸ ನೆರವೇರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ.ಎಚ್.ಎಸ್. ಶೆಟ್ಟಿ ಅವರು, ಪೇಜಾವರ ಶ್ರೀಗಳು ರಾಮ ಮಂದಿರವಾಗಿದೆ, ರಾಮ ರಾಜ್ಯವಾಗಬೇಕಾಗಿದೆ ಎಂಬ ಸಂದೇಶ ನೀಡಿದ್ದರು. ಅವರ ಆಶಯದಂತೆ ಬಡವರಿಗೆ ಮನೆ ನಿರ್ಮಿಸಿಕೊಡಲಾಗುತ್ತಿದೆ ಎಂದು ಹೇಳಿದರು.

ಬಡವರಿಗೆ ಸೂರು ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ನಾಲ್ಕು ತಿಂಗಳ ಹಿಂದೆ ಸೌಡ ಹರಿಪ್ರಸಾದ್‌ ಅವರ ಜತೆ ಜನ್ನಾಡಿ ಕೊರಗರ ಕಾಲೊನಿ ಭೇಟಿ ನೀಡಿದ್ದಾಗ ಮನೆಯಿಲ್ಲದೆ ಜನರು ಸಂಕಷ್ಟ ಅನುಭವಿಸುತ್ತಿರುವುದು ಗಮನಕ್ಕೆ ಬಂತು. ಹೀಗಾಗಿ ಅವರಿಗೆ ಸೂರು ಕಲ್ಪಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ವಿಚಾರಿಸಿದಾಗ, 3.5 ಲಕ್ಷ ನೆರವು ಸಿಗುತ್ತದೆ ಎಂದು ಹೇಳಿದರು. ಆದರೆ, ಆ ಪ್ರಕ್ರಿಯೆ ನಡೆಯಲು 1ರಿಂದ 2 ವರ್ಷ ಬೇಕಾಗಿತ್ತು. ನಂತರ ಏನು ಮಾಡುವುದು ಎಂದು ಆಲೋಚನೆಯಲ್ಲಿದ್ದಾಗ ಅಯೋಧ್ಯೆಗೆ ತೆರಳುವ ಅವಕಾಶ ಸಿಕ್ಕಿತು.

ಜಿಲ್ಲೆಯಲ್ಲಿ ಸಮಾಜ ಸೇವೆ ಸಲ್ಲಿಸುತ್ತಿರುವ ಪ್ರಮುಖರಿಗೆ ಅಯೋಧ್ಯೆ ರಾಮ ಮಂದಿರ ಪ್ರತಿಷ್ಠಾಪನೆಗೆ ಪೇಜಾವರ ಶ್ರೀಗಳು ಆಹ್ವಾನ ನೀಡಿದ್ದರು. ಇದರಿಂದ ನಾನು ಅಯೋಧ್ಯೆಗೆ ತೆರಳಿದ್ದೆ, ಸ್ವಾಮೀಜಿಯವರ ದಯೆಯಿಂದ ನಮಗೆ ರಾಮಲಲ್ಲಾ ದರ್ಶನವಾಯಿತು. ನಂತರ ಸ್ವಾಮೀಜಿಗಳ ಒಂದು ಸಂದೇಶ ಓದಿದೆ. “ರಾಮ ಮಂದಿರವಾಗಿದೆ. ರಾಮ ರಾಜ್ಯವಾಗಬೇಕಾಗಿದೆ. ಪ್ರಜೆಗಳು ನೆಮ್ಮದಿಯಿಂದ ಬಾಳ್ವೆಯನ್ನು ನಡೆಸಬೇಕಾದರೆ ಭಾರತದಂತಹ ಜನ ನಿಬಿಡ ದೇಶದಲ್ಲಿ ಬಡತನ ನಿರ್ಮೂಲನವಾಗಬೇಕಾಗಿದೆ. ಉಳ್ಳವರು ಸಮಾಜದಲ್ಲಿ ನೊಂದವರಿಗೆ ಮನೆ ನಿರ್ಮಿಸಿ, ವಿದ್ಯಾಭ್ಯಾಸಕ್ಕೆ ನೆರವು ನೀಡಿ ಆರ್ಥರ ನೋವಿಗೆ ಸ್ಪಂದಿಸಿದಲ್ಲಿ ರಾಮರಾಜ್ಯ ಅಕ್ಷರರ್ಶ ನಿಜವಾಗುತ್ತದೆ ಎಂದು ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದ್ದರು.

ನಾನು ಸ್ವಾಮೀಜಿಗಳ ಸಂದೇಶದ ಬಗ್ಗೆ ಆಲೋಚನೆ ಮಾಡುತ್ತಿದ್ದೆ. ಆ ಸಮಯದಲ್ಲಿ ನನಗೆ ಹರಿಪ್ರಸಾದ್‌ರಿಂದ ಮತ್ತೆ ಕರೆ ಬಂತು. ಮಳೆಗಾಲದಲ್ಲಿ ಜನ್ನಾಡಿ ಕೊರಗರ ಕಾಲೊನಿಯಲ್ಲಿ ಜನರು ಮನೆಯಿಲ್ಲದೇ ನೆನೆಯುವ ಸ್ಥಿತಿ ಇದೆ ಎಂದು ಹೇಳಿದರು. ಆಗ ನನಗೆ ಸ್ವಾಮೀಜಿಗಳು ಮಾಡಿದ ಆಶೀರ್ವಾದ ನೆನಪಾಯಿತು. ಮತ್ತಷ್ಟು ಸಮಾಜ ಸೇವೆ ಮಾಡಲು ಆಶೀರ್ವಾದ ಮಾಡುವಂತೆ ಸ್ವಾಮೀಜಿಗಳನ್ನು ಕೇಳಿದ್ದೆ. ಆಗ ಶ್ರೀಗಳು ದೈವೇಚ್ಛೆ ಎಂದು ಹೇಳಿದ್ದರು. ಹೀಗಾಗಿ ಸ್ವಾಮೀಜಿಗಳ ಆಶೀರ್ವಾದದಿಂದಲೇ ನನಗೆ ಈ ಅವಕಾಶ ಸಿಕ್ಕಿದೆ ಎಂದು ಭಾವಿಸಿ, ಬಡವರಿಗೆ ಮನೆ ನಿರ್ಮಿಸಿಕೊಡು ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ | Raja Marga Column : ಅವರು ಕೇವಲ ಟಿ.ಎನ್‌ ಸೇಷನ್‌ ಅಲ್ಲ, ಪ್ರಜಾಪ್ರಭುತ್ವದ ಆಲ್ಸೇಷನ್‌!

ಇನ್ನು ಎರಡು ಮೂರು ತಿಂಗಳಲ್ಲಿ ಮನೆಗಳ ಕಾಮಗಾರಿ ಪೂರ್ಣಗೊಳಿಸುವ ಗುರಿಯಿದೆ. ತಲಾ 10ರಿಂದ 12 ಲಕ್ಷ ರೂ.ಗಳ ವೆಚ್ಚದಲ್ಲಿ ಒಟ್ಟು 14 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಯಾವುದೇ ಆಗಲಿ ಉಚಿತವಾಗಿ ಕೊಡುವಾಗ ಗುಣಮಟ್ಟದಲ್ಲಿ ರಾಜಿಯಾಗುತ್ತಾರೆ. ಆದರೆ, ನಾವು ಉತ್ತಮ ರೀತಿಯಲ್ಲಿ ಮನೆ ನಿರ್ಮಿಸುವುದು ನಮ್ಮ ಯೋಜನೆಯಾಗಿದೆ ಎಂದು ತಿಳಿಸಿದರು.

Exit mobile version