Site icon Vistara News

Dr HS Shetty: ಅ.7ರಂದು ಡಾ. ಎಚ್.ಎಸ್.ಶೆಟ್ಟಿ ಅಭಿನಂದನಾ ಸಮಾರಂಭ, 300 Trees, ಸಮೃದ್ಧ ಬೈಂದೂರು ಅನಾವರಣ

Dr HS Shetty

ಉಡುಪಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ (Doctor of Science) ಗೌರವ ಪಡೆದ ಹಿನ್ನೆಲೆಯಲ್ಲಿ ಉದ್ಯಮಿ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ (Dr HS Shetty) ಅವರಿಗೆ ಅಭಿನಂದನಾ ಸಮಾರಂಭ, ಸರ್ಕಾರಿ ಶಾಲೆಗಳ ಉಳಿವು ಮತ್ತು ಅಭಿವೃದ್ಧಿಗಾಗಿ ರೂಪಿಸಿರುವ ವಿಶಿಷ್ಟ ಯೋಜನೆ ‘300 Trees’ ಉದ್ಘಾಟನೆ ಹಾಗೂ ʼಸಮೃದ್ಧ ಬೈಂದೂರುʼ ಪರಿಕಲ್ಪನೆ ಅನಾವರಣ ಕಾರ್ಯಕ್ರಮವನ್ನು ಅಕ್ಟೋಬರ್‌ 7ರಂದು ಮಧ್ಯಾಹ್ನ 3 ಗಂಟೆಗೆ ಜಿಲ್ಲೆಯ ಕುಂದಾಪುರ ತಾಲೂಕಿನ ತ್ರಾಸಿಯ ಕೊಂಕಣ ಖಾರ್ವಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ.ರಾಘವೇಂದ್ರ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಮಣಿಪಾಲದ ಮಾಹೆ ವಿಶ್ವವಿದ್ಯಾಲಯದ ಪ್ರೊ ಚಾನ್ಸಲರ್‌ ಡಾ. ಎಚ್.ಎಸ್. ಬಲ್ಲಾಳ್ ಅವರು ಆಗಮಿಸಲಿದ್ದಾರೆ. ಸನ್ಮಾನಿತ ಉದ್ಯಮಿ, ಬೆಂಗಳೂರಿನ ಮೈಸೂರು ಮರ್ಕೇಂಟೈಲ್ ಕಂಪೆನಿ ಲಿಮಿಟೆಡ್‌ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷರು ಹಾಗೂ ವಿಸ್ತಾರ ನ್ಯೂಸ್‌ ಕಾರ್ಯ ನಿರ್ವಾಹಕ ಚೇರ್ಮನ್ ಡಾ. ಎಚ್.ಎಸ್.ಶೆಟ್ಟಿ ಅವರು ಉಪಸ್ಥಿತರಿರಲಿದ್ದು, ವಿಸ್ತಾರ ನ್ಯೂಸ್‌ ಸಿಇಒ ಮತ್ತು ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಅವರು ಶುಭಾಶಂಸನೆ ಮಾಡಲಿದ್ದಾರೆ.

ಸಮೃದ್ಧ ಬೈಂದೂರು

ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ʼಸಮೃದ್ಧ ಬೈಂದೂರುʼ ವೆಬ್‌ಸೈಟ್ ಅನಾವರಣ ಮಾಡಲಿದ್ದು, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಅವರು ಲೋಗೋ, ಶ್ರೀ ಕ್ಷೇತ್ರ ಕೊಲ್ಲೂರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಅವರು ಫೇಸ್‌ಬುಕ್‌, ಒಬಿಜಿ ಕಾರವಾರ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ಡಾ. ಅಣ್ಣಪ್ಪ ಶೆಟ್ಟಿ ಅವರು ಇನ್‌ಸ್ಟಾಗ್ರಾಂ, ತ್ರಾಸಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಿಥುನ್ ದೇವಾಡಿಗ ಅವರು ಎಕ್ಸ್ (ಟ್ವಿಟರ್), ಭಗವದ್ಗೀತೆ ಅಭಿಯಾನ ಕರ್ನಾಟಕದ ಉಡುಪಿ ಜಿಲ್ಲಾ ಸಂಚಾಲಕ ರಾಮಕೃಷ್ಣ ಶೇರಿಗಾರ್ ಅವರು ಯೂ ಟ್ಯೂಬ್ ಅನಾವರಣ ಮಾಡಲಿದ್ದಾರೆ.

300 TREES

ಬೆಂಗಳೂರಿನ ಮೈಸೂರು ಮರ್ಕೇಂಟೈಲ್ ಕಂಪೆನಿ ಲಿಮಿಟೆಡ್‌ನ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಮತ್ತು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಅಧ್ಯಕ್ಷ ಡಾ. ಎಚ್.ಎಸ್.ಶೆಟ್ಟಿ ಅವರು ʼ300 TREESʼ ಯೋಜನೆ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಘಟಪ್ರಭಾದ ಜೆ.ಎನ್‌.ಎಸ್. ಕನ್‌ಸ್ಟ್ರಕ್ಷನ್ಸ್‌ನ ಎಚ್.ಜಯಶೀಲ ಶೆಟ್ಟಿ, ಮಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಶಾಂತಾರಾಮ್ ಶೆಟ್ಟಿ, ಮುಂಬೈನ ಉದ್ಯಮಿ ಜನಾರ್ದನ ದೇವಾಡಿಗ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ | Narahalli Award: ಬಸವನಗುಡಿಯಲ್ಲಿ ಅ.8ರಂದು ನರಹಳ್ಳಿ ಪ್ರಶಸ್ತಿ, ನರಹಳ್ಳಿ ದಶಮಾನ ಪುರಸ್ಕಾರ ಪ್ರದಾನ

ಏನಿದು ʼಸಮೃದ್ಧ ಬೈಂದೂರುʼ ಪರಿಕಲ್ಪನೆ?

ಕರಾವಳಿ ಜಿಲ್ಲೆಗಳ ಭಾಗವಾಗಿರುವ ಬೈಂದೂರು ವಿಧಾನಸಭಾ ಕ್ಷೇತ್ರವು ಅಭಿವೃದ್ಧಿಗೆ ಪೂರಕವಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆ. ಆದರೆ, ಸ್ಪಷ್ಟವಾದ ಯೋಜನೆಗಳು, ಪೂರಕವಾದ ಸಂಪನ್ಮೂಲಗಳು, ಅಗತ್ಯವಾದ ಅನುಷ್ಠಾನಗಳ ಕೊರತೆಯಿಂದಾಗಿ ನಿರೀಕ್ಷೆಯಷ್ಟು ಅಭಿವೃದ್ಧಿ ಕಂಡಿಲ್ಲ ಎನ್ನುವ ಕೊರಗು ಬೈಂದೂರಿಗರದ್ದು. ಬೈಂದೂರಿನ ಅಭಿವೃದ್ಧಿಯಲ್ಲಿ ಶೈಕ್ಷಣಿಕ ಕ್ಷೇತ್ರ, ಆರೋಗ್ಯ ಕ್ಷೇತ್ರಗಳ ಜತೆಯಲ್ಲಿ ಪ್ರವಾಸೋದ್ಯಮ, ತಂತ್ರಜ್ಞಾನ, ವಾಣಿಜ್ಯೀಕರಣ, ಮತ್ಸ್ಯೋದ್ಯಮ ಹೀಗೆ ವಿಪುಲ ಅವಕಾಶಗಳನ್ನು ಬಳಸಿಕೊಂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯತ್ತ ಹೆಜ್ಜೆ ಹಾಕುವ ದಿಟ್ಟ ಕಾರ್ಯಕ್ರಮವೇ ಸಮೃದ್ಧ ಬೈಂದೂರು. ಈ ಯೋಜನೆಯ ಅನುಷ್ಠಾನಕ್ಕೆ ಬಹು ಮುಖ್ಯವಾಗಿ ಬೈಂದೂರಿನ ಉದ್ಯಮಿಗಳು, ಯುವಜನತೆ, ಹಾಗೂ ವಿದ್ಯಾರ್ಥಿಗಳ ಸಹಭಾಗಿತ್ವ ಅತೀ ಅಗತ್ಯವಾಗಿದೆ. ಬೈಂದೂರನ್ನು ಸಮೃದ್ಧ ಬೈಂದೂರು ಆಗಿ ಬದಲಿಸಲು ಸಹಕಾರ ನೀಡುವಂತೆ ಸಮೃದ್ಧ ಬೈಂದೂರು ತಂಡ ಮನವಿ ಮಾಡಿದೆ.

Exit mobile version