ಉಡುಪಿ: ಶಿರೂರು ದೋಣಿ ದುರಂತದಲ್ಲಿ ಇಬ್ಬರು ಮೀನುಗಾರರು (Drowned in Water) ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರಿನಲ್ಲಿ ಘಟನೆ ನಡೆದಿದೆ. ಅಬ್ದುಲ್ ಸತ್ತರ್ (45), ಮಿಸ್ಬಾ ಯೂಸಫ್ (48) ಮೃತಪಟ್ಟ ಮೀನುಗಾರರು.
ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗಾಗಿ ತೆರಳಿದ್ದರು. ಈ ವೇಳೆ ಶಿರೂರು ಕಳುಹಿತ್ಲು ಅಳಿವೆ ಸಮೀಪ ದೋಣಿ ಮಗುಚಿತ್ತು. ಪರಿಣಾಮ ಸಮುದ್ರಕ್ಕೆ ಮೂವರು ಮೀನುಗಾರರು ಬಿದ್ದರು. ಈ ವೇಳೆ ಬುಡ್ಡು ಮುಕ್ತಾರ್ (37) ಎಂಬುವವರನ್ನು ರಕ್ಷಣೆ ಮಾಡಲಾಗಿತ್ತು. ಸಮುದ್ರದಲ್ಲಿ ನಾಪತ್ತೆಯಾಗಿದ್ದ ಮತ್ತಿಬ್ಬರ ಮೀನುಗಾರರಿಗೆ ಹುಡುಕಾಟ ನಡೆಸಲಾಗಿತ್ತು. ಆದರೆ ಇಂದು ಶವವಾಗಿ ಪತ್ತೆಯಾಗಿದ್ದಾರೆ.
ಕಳೆದ ವರ್ಷ ಇದೇ ಭಾಗದಲ್ಲಿ ಮೀನುಗಾರಿಕಾ ದುರಂತ ನಡೆದಿತ್ತು. ಇದೀಗ ಮತ್ತೊಮ್ಮೆ ದುರಂತ ನಡೆದಿದ್ದು, ಮೀನುಗಾರರಿಬ್ಬರು ಮೃತಪಟ್ಟಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Road Accident : ತುಮಕೂರಲ್ಲಿ ಭೀಕರ ಅಪಘಾತ; ಲಾರಿ ಡಿಕ್ಕಿ, ಸವಾರನ ತಲೆ ಛಿದ್ರ!
ಕೆರೆಗೆ ಹಾರಿದ ಮಹಿಳೆ!
ನೀರಲ್ಲಿ ಮುಳುಗುತ್ತಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಣೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೆರೆಬಿಳಚಿ ಬಳಿ ಇರುವ ಐತಿಹಾಸಿಕ ಸೂಳೆಕೆರೆಯಲ್ಲಿ ನಡೆದಿದೆ.
ನೀರಿನಲ್ಲಿ ಮುಳುಗುತ್ತಿದ್ದಾಗ ಕಾಪಾಡಿ ಕಾಪಾಡಿ ಎಂದು ಕೂಗಿ ಮಹಿಳೆ ರಕ್ಷಣೆಗೆ ಬೇಡಿಕೊಂಡಿದ್ದಾಳೆ. ಇದನ್ನೂ ಗಮನಿಸಿದ ಕೆರೆಬಿಳಿಚಿ ಗ್ರಾಮದ ಮಹ್ಮದ್ ಅಶ್ರಫ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಕೆರೆಗೆ ಹಾರಿ ಮಹಿಳೆಯನ್ನು ರಕ್ಷಿಸಿದ್ದಾರೆ. ಚನ್ನಗಿರಿ ತಾಲೂಕಿನ ತ್ಯಾವಣಗಿ ಗ್ರಾಮದ ಮಹಿಳೆ ಒಬ್ಬಂಟಿಯಾಗಿ ಸೂಳೆಕೆರೆಗೆ ಬಂದಿದ್ದಾಗಿ ತಿಳಿದು ಬಂದಿದೆ. ನೀರಿಗೆ ಹಾರಿ ಬಳಿಕ ಕೆರೆ ಸಿದ್ದನನಾಲೆ ತೂಬಿನ ಕಬ್ಬಿಣ ಸಲಾಕೆ ಹಿಡಿಕೊಂಡು ರಕ್ಷಣೆ ಕೂಗಿದ್ದಾಳೆ.
ಸ್ಥಳದಲ್ಲಿಯೇ ಇದ್ದ ಗೃಹ ರಕ್ಷಕ ದಳದ ಸಿಬ್ಬಂದಿ ಹಾಗೂ ಸೂಳೆಕೆರೆಗೆ ಬಂದಿದ್ದ ಪ್ರವಾಸಿಗರು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ಮಹಿಳೆ ನೀರಿಗೆ ಹಾರಿದ್ದು ಯಾವ ಕಾರಣಕ್ಕೆ ಎಂಬುದು ನಿಗೂಢವಾಗಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬಸವಾ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಲಿಂಕ್ ಕ್ಲಿಕ್ ಮಾಡಿ