Site icon Vistara News

Dr HS Shetty: ಕುಂದಾಪುರದ ಹಾಲಾಡಿಯಲ್ಲಿ ಜ. 21ರಂದು ಡಾ. ಎಚ್‌.ಎಸ್‌.ಶೆಟ್ಟಿಯವರಿಗೆ ಅಭಿನಂದನಾ ಸಮಾರಂಭ

HS Shetty

ಉಡುಪಿ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಡಾಕ್ಟರ್‌ ಆಫ್‌ ಸೈನ್ಸ್‌ (Doctor of Science) ಗೌರವ ಪಡೆದ ಹಿನ್ನೆಲೆಯಲ್ಲಿ ಉದ್ಯಮಿ ಡಾ. ಶ್ರೀನಿವಾಸ ಶೆಟ್ಟಿ ಹಾಲಾಡಿ (Dr HS Shetty) ಅವರಿಗೆ ಅಭಿನಂದನಾ ಸಮಾರಂಭವನ್ನು ಜನವರಿ 21ರಂದು ರಾತ್ರಿ 7 ಗಂಟೆಗೆ ಜಿಲ್ಲೆಯ ಕುಂದಾಪುರ ತಾಲೂಕಿನ ಹಾಲಾಡಿ ಶ್ರೀ ಆದಿಮರಳುಚಿಕ್ಕು ದೈವಸ್ಥಾನದ ವಠಾರದಲ್ಲಿ ಆಯೋಜಿಸಲಾಗಿದೆ.

ಶ್ರೀ ಆದಿಮರಳುಚಿಕ್ಕು ದೈವಸ್ಥಾನದ ಆಡಳಿತ ಮಂಡಳಿ, ಭಕ್ತಾದಿಗಳು, ಹಾಲಾಡಿ ಕುದ್ರುಮನೆ, ಹಾಲಾಡಿ ಕಾಡಿಮನೆ ಮತ್ತು ಉಳ್ಳೂರು ಭಂಡಾರರಮನೆ ಕುಟುಂಬಿಕರಿಂದ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ. ದಕ್ಷಿಣ ಕನ್ನಡದ ಕಿನ್ನಿಗೋಳಿಯ ಶ್ರೀ ಶಕ್ತಿ ದರ್ಶನ ಯೋಗಾಶ್ರಮದ ಪರಮಪೂಜ್ಯ ದೇವ ಬಾಬಾಜಿ ಅವರು ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಿದ್ದು, ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಅವರು ಡಾ. ಎಚ್‌.ಎಸ್‌.ಶೆಟ್ಟಿ ಅವರನ್ನು ಸನ್ಮಾನಿಸಲಿದ್ದಾರೆ.

ಹಾಲಾಡಿ ಕುದ್ರುಮನೆ ಡಾ. ಶ್ರೀನಿವಾಸ ಶೆಟ್ಟಿಯವರ ಅಭಿನಂದನಾ ಸಮಿತಿ ಅಧ್ಯಕ್ಷ ರಾಘವ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು, ಹಾಲಾಡಿ ಕುದ್ರುಮನೆಯ ಗೋಪಾಲ ಶೆಟ್ಟಿ, ಉಳ್ಳೂರು ಭಂಡಾರರಮನೆಯ ದೇವೇಂದ್ರ ಶೆಟ್ಟಿ, ಹಾಲಾಡಿ ಕಾಡಿಮನೆಯ ಜಯರಾಮ ಶೆಟ್ಟಿ ಅವರು ಉಪಸ್ಥಿತರಿರಲಿದ್ದಾರೆ.

ರಾತ್ರಿ 8 ಗಂಟೆಗೆ ದಕ್ಷಿಣ ಕನ್ನಡದ ಕಿನ್ನಿಗೋಳಿಯ ಶ್ರೀ ಶಕ್ತಿದರ್ಶನ ಯೋಗಾಶ್ರಮದಿಂದ ʼವಿಶ್ವಮಾತಾ ಗೋಮಾತಾʼ ದ್ವಿಭಾಷಾ ನೃತ್ಯ ನಾಟಕ ನಡೆಯಲಿದೆ.

ಯಶಸ್ವೀ ಉದ್ಯಮಿ ಡಾ.ಎಚ್‌.ಎಸ್‌.ಶೆಟ್ಟಿ

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿ ಜನಿಸಿದ ಡಾ.ಎಚ್‌.ಎಸ್‌.ಶೆಟ್ಟಿ ಅವರು ಹೋಟೆಲ್‌ ಉದ್ಯಮಿಯಾಗಿ ಹೆಸರು ಮಾಡಿದ್ದಾರೆ. ಜತೆಗೆ ಬಟ್ಟೆ ಮತ್ತು ಖಾದ್ಯ ತೈಲ ವಹಿವಾಟು, ಕೃಷಿ ಸಂಬಂಧಿ ಉತ್ಪನ್ನಗಳ ಮಾರಾಟ, ವಿದ್ಯುತ್‌ ಉತ್ಪಾದನೆ ಹೀಗೆ ಹಲವು ಕ್ಷೇತ್ರಗಳಲ್ಲಿ ಯಶಸ್ವೀ ಉದ್ಯಮಿ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ | ವಾಗ್ದೇವಿ ವಿಲಾಸ ಶಾಲೆಯಲ್ಲಿ ಜ. 22ರಂದು ಸಂಪೂರ್ಣ ರಾಮಾಯಣ ಪ್ರದರ್ಶನ, ಶ್ರೀರಾಮ ಜಯಂ ಪುಸ್ತಕ ಬಿಡುಗಡೆ

ಮೈಸೂರು ಮರ್ಕೆಂಟೈಲ್‌ ಕಂಪನಿ ಲಿಮಿಟೆಡ್‌ ಸ್ಥಾಪಿಸಿ, ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತ ರೈತರಿಗೆ ನೆರವಾಗುತ್ತಿರುವ ಇವರಿಗೆ ಆರು ಬಾರಿ ಬೆಸ್ಟ್‌ ಎಕ್ಸ್‌ಪೋರ್ಟ್‌ ಅವಾರ್ಡ್‌ ಲಭಿಸಿದೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಸ್ಥಾಪಿಸಿ, ಸರ್ಕಾರಿ ಶಾಲೆ ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡುತ್ತಿದ್ದಾರೆ. ವಿಸ್ತಾರ ನ್ಯೂಸ್‌ನ (Vistara News) ಕಾರ್ಯ ನಿರ್ವಾಹಕ ಚೇರ್ಮನ್ (Executive Chairman) ಆಗಿರುವ ಡಾ. ಎಚ್‌.ಎಸ್‌. ಶೆಟ್ಟಿ (Dr HS Shetty) ಅವರಿಗೆ ಇತ್ತೀಚೆಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 23ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿತ್ತು.

Exit mobile version