ಉಡುಪಿ: ಬೈಂದೂರು ಕ್ಷೇತ್ರದಲ್ಲಿ ಬಿರುಗಾಳಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಶಾಸಕ ಗುರುರಾಜ ಗಂಟಿಹೊಳೆ (Gururaj Gantihole) ಅವರು ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬೈಂದೂರು ತಾಲೂಕಿನಾದ್ಯಂತ ಭಾರಿ ಮಳೆಯಿಂದ (Heavy Rain) ಜನರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಬೈಂದೂರು ತಾಲೂಕು ತಲ್ಲೂರು ಕೋಟೆ ಬಾಗಿಲು ಬಯಲು ಮನೆ ಪ್ರದೇಶಕ್ಕೆ ಶಾಸಕರು ಭೇಟಿ ನೀಡಿ, ಮಳೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಗಾಳಿ ಮಳೆಯಿಂದ ಅಪಾರ ಪ್ರಮಾಣದ ತೋಟಗಾರಿಕೆ ಸೇರಿ ವಿವಿಧ ರೀತಿಯ ಬೆಳೆಗಳಿಗೆ ಹಾನಿಯಾಗಿದೆ. ಹೀಗಾಗಿ ನೆರೆಪೀಡಿತ ಪ್ರದೇಶಗಳಿಗೆ ಅಧಿಕಾರಿಗಳೊಂದಿಗೆ ತೆರಳಿದ ಶಾಸಕರು, ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇದನ್ನೂ ಓದಿ | Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!
ಉಡುಪಿ ಜಿಲ್ಲೆಯಲ್ಲಿ ಶಾಲಾ-ಕಾಲೇಜುಗಳಿಗೆ ನಾಳೆ ರಜೆ
ಉಡುಪಿ: ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ಮಂಗಳವಾರ (ಜು.9) ರಜೆ ಘೋಷಿಸಲಾಗಿದೆ. ಸತತ ನಾಲ್ಕನೇ ದಿನಗಳಿಂದ ಭಾರಿ ಮಳೆ ಸುರಿಯುತ್ತಿರುವುದರಿಂದ ಜಿಲ್ಲೆಯ ಏಳು ತಾಲೂಕುಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಮುಂಜಾಗ್ರತೆ ಕ್ರಮವಾಗಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಿಗೆ ಉಡುಪಿ ಜಿಲ್ಲಾಧಿಕಾರಿರಜೆ ಘೋಷಣೆ ಮಾಡಿದ್ದಾರೆ.
ದೇವಸ್ಥಾನ ತಡೆಗೋಡೆ ಕುಸಿತ
ಮಂಗಳೂರಿನಲ್ಲಿ ಭಾರೀ ಮಳೆಗೆ ಮತ್ತೊಂದು ಅವಘಡ ಸಂಭವಿಸಿದೆ. ನಿರಂತರ ಮಳೆಗೆ ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ತಡೆಗೋಡೆ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ತಾಲೂಕಿನ ಪಾವಂಜೆ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ತಡೆಗೋಡೆ ಬಿದ್ದಿದೆ.
ಭಾರೀ ಗಾಳಿ ಮತ್ತು ಮಳೆಗೆ ತೆಂಗಿನ ಗಿಡದ ಬುಡದ ಮಣ್ಣು ಸಡಿಲಗೊಂಡಿದೆ. ಪರಿಣಾಮ ಕೆಂಪು ಕಲ್ಲಿನ ಐದಾರು ಅಡಿ ಎತ್ತರದ ತಡೆಗೋಡೆ ಕುಸಿದಿದೆ. ಪರಿಣಾಮ ವಿದ್ಯುತ್ ಕಂಬ, ಬಾವಿ ಹಾಗೂ ದೇವಸ್ಥಾನದ ಪಾರ್ಕಿಂಗ್ ಜಾಗಕ್ಕೆ ಹಾನಿಯಾಗಿದೆ. ಯಾವುದೇ ವಾಹನ ಪಾರ್ಕ್ ಮಾಡದ ಹಿನ್ನೆಲೆಯಲ್ಲಿ ಅನಾಹುತ ತಪ್ಪಿದೆ. ಸದ್ಯ ಮಣ್ಣು ತೆಗೆದು ಪ್ಲಾಸ್ಟಿಕ್ ಟರ್ಪಾಲ್ ಹಾಕಿ ಮುನ್ನೆಚ್ಚರಿಕೆ ವಹಿಸಲಾಗಿದೆ.
ಇದನ್ನೂ ಓದಿ | Mumbai Rain : ಭಾನುವಾರ ರಾತ್ರಿ ಪೂರ್ತಿ ಸುರಿದ ಮಳೆಗೆ ಮುಂಬೈ ನಗರದ ಹಲವು ಪ್ರದೇಶಗಳು ಜಲಾವೃತ
ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ
ಉತ್ತರ ಕನ್ನಡದ ಕಾರವಾರದ ಕದ್ರಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ. ವಿದ್ಯುತ್ ಉತ್ಪಾದನೆ ಹಾಗೂ ಕ್ರಸ್ಟ್ ಗೇಟ್ ಸೇರಿ 31,000 ಕ್ಯೂಸೆಕ್ಸ್‌ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. 34.50 ಮೀ ಗರಿಷ್ಠ ಸಾಮರ್ಥ್ಯದ ಕದ್ರಾ ಜಲಾಶಯದಿಂದ 4 ಗೇಟ್‌ಗಳಿಂದ 10,600 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದೆ.
ಸದ್ಯ ಜಲಾಶಯದಲ್ಲಿ 31 ಮೀ ನೀರಿನ ಸಂಗ್ರಹ ತಲುಪಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತವು ಜಲಾಶಯದಲ್ಲಿ 30 ಮೀ ನೀರು ಸಂಗ್ರಹಕ್ಕೆ ನಿಗಧಿಪಡಿಸಿದೆ. ಕರಾವಳಿ ಭಾಗದಲ್ಲಿ ಧಾರಾಕಾರ ಮಳೆಯಿಂದ ಜಲಾಶಯದ ಒಳಹರಿವು ಹೆಚ್ಚಿದ್ದು,22,000 ಕ್ಯೂಸೆಕ್ಸ್ ನೀರು ಜಲಾಶಯಕ್ಕೆ ಹರಿದುಬರುತ್ತಿದೆ. ಜಲಾಶಯದಿಂದ ವಿದ್ಯುತ್ ಉತ್ಪಾದಿಸಿ 21,000 ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ನದಿ ಪಾತ್ರದ ನಿವಾಸಿಗಳನ್ನು ಸ್ಥಳಾಂತರಗೊಳಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ