ಉಡುಪಿ: ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಮಾತೊಂದು ಪ್ರಚಲಿತದಲ್ಲಿದೆ. ಪಡೆದುಕೊಂಡದ್ದನ್ನು ಅಲ್ಲಿಗೇ ಹಿಂದಿರುಗಿಸುವುದು ಈ ಮಾತಿನ ಅರ್ಥ. ಅದರಂತೆ ಅತ್ಯಂತ ಕಷ್ಟದಲ್ಲಿ ವಿದ್ಯಾಭ್ಯಾಸ ಪಡೆದು ಉದ್ಯಮವನ್ನು ಸ್ಥಾಪಿಸಿ ಯಶಸ್ವಿಯಾದ ಉದ್ಯಮಿ ಎಚ್.ಎಸ್. ಶೆಟ್ಟಿ (H S Shetty) ಅವರು, ತಾವು ಕಲಿತ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್ ನೀಡುವ ಮೂಲಕ ನೆರವಾಗುತ್ತಿದ್ದಾರೆ.
ಹೌದು, ಉದ್ಯಮಿ ಎಚ್.ಎಸ್. ಶೆಟ್ಟಿ ಅವರು ಕೆಲ ದಶಕಗಳ ಹಿಂದೆ ವಿದ್ಯಾರ್ಥಿ ದೆಸೆಯಲ್ಲಿದ್ದಾಗ ಅತ್ಯಂತ ಕಷ್ಟದ ದಿನಗಳನ್ನು ಕಂಡಿದ್ದರು. ವಿದ್ಯಾರ್ಥಿಯಾಗಿದ್ದಾಗ ನೆರವು ಎಷ್ಟು ಪ್ರಾಮುಖ್ಯ ಎನ್ನುವುದನ್ನು ಅರಿತಿದ್ದರು. ಹೀಗಾಗಿ ಅವರು ಕಲಿತ ಕುಂದಾಪುರದ ಭಂಡಾರ್ಕಾರ್ಸ್ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸತತ ಐದು ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ವೇತನ ನೀಡುತ್ತಾ ಬಂದಿದ್ದಾರೆ.
ಕಾಲೇಜಿನಲ್ಲಿ ಶನಿವಾರ ಬೆಂಗಳೂರಿನ ಹೆಗ್ಗುಂಜೆ ರಾಜೀವ ಶೆಟ್ಟಿ ಸೊಸೈಟಿ (ರಿ) ವತಿಯಿಂದ 2022-23 ಸಾಲಿನಲ್ಲಿ ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಆಯ್ಕೆ ಮಾಡಿದ 200 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಈ ವೇಳೆ ಸೊಸೈಟಿ ಅಧ್ಯಕ್ಷ ಎಚ್.ಎಸ್.ಶೆಟ್ಟಿ ಅವರು ತಮ್ಮ ಶಾಲಾ ಜೀವನವನ್ನು ಮೆಲುಕು ಹಾಕಿದರು.
ಇದನ್ನೂ ಓದಿ | MP BY Raghavendra | ಮೋದಿಯವರ ಮಾನವೀಯ ಕಾರ್ಯ ಜನರಿಗೆ ತಲುಪಿಸಿ ಎಂದ ಸಂಸದ ಬಿ.ವೈ ರಾಘವೇಂದ್ರ
ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮಕ್ಕೆ ಸ್ಕೂಲ್ ಆಫ್ ಮೆಡಿಸಿನ್, ಅಮೆರಿಕದ ಟೆಕ್ಸಾಸ್ ಎ ಆ್ಯಂಡ್ ಎಂ ಯೂನಿವರ್ಸಿಟಿಯ ಪ್ರೊ.ಅಶೋಕ್ ಕೆ.ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯ ಕೆ. ಶಾಂತಾರಾಮ್ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ಕೋಟ ಅವರು, ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅದರ ಹೊರತಾಗಿಯೂ ಒಂದಿಷ್ಟು ಕೊರತೆಗಳಿವೆ. ಆದರೆ ಎಚ್.ಎಸ್.ಶೆಟ್ಟಿಯವರಂಥ ದಾನಿಗಳು ಆ ಕೊರತೆ ನಿವಾರಿಸುತ್ತಿದ್ದಾರೆ ಎಂದು ಹೇಳಿ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿದರು.
ಕಾರ್ಯಕ್ರಮದಲ್ಲಿ 200 ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಅಲ್ಲದೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ನೆರವಾಗುವಂತಹ ಯೋಜನೆಗಳ ಮೂಲಕ ನಿರಂತರ ಸಹಕಾರ ನೀಡುವ ಭರವಸೆಯನ್ನು ಹೆಗ್ಗುಂಜಿ ರಾಜೀವ ಶೆಟ್ಟಿ ಸೊಸೈಟಿ ನೀಡಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ | Sirsi News | ಶಿರಸಿ ಪ್ರತ್ಯೇಕ ಜಿಲ್ಲೆ ರಚನೆ ಆಗ್ರಹಿಸಿ ಬೃಹತ್ ಪ್ರತಿಭಟನೆ