ಉಡುಪಿ: ಅಪ್ಪ- ಅಮ್ಮನ ಮದುವೆ ವರ್ಷಾಚರಣೆಯನ್ನು ಮಕ್ಕಳು ಅದ್ಧೂರಿಯಾಗಿ ಆಚರಿಸುವುದು ಹೊಸದೇನಲ್ಲ. 25ನೇ ವರ್ಷ, 50ನೇ ವರ್ಷವನ್ನು ಬಂಧು-ಮಿತ್ರರೊಡಗೂಡಿ ಭಾರಿ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ, ಇಲ್ಲೊಂದು ದಂಪತಿಯ ಮಕ್ಕಳು ಅಪ್ಪ-ಅಮ್ಮನ ಮದುವೆಯ ಐವತ್ತನೇ ವಾರ್ಷಿಕೋತ್ಸವದ ಖುಷಿಗಾಗಿ ಊರಿಗೇ ಒಂದು ಹೈಟೆಕ್ ಬಸ್ ತಂಗುದಾಣವನ್ನು ಕೊಡುಗೆಯಾಗಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಶಿರ್ವದಲ್ಲಿ ಈ ಬಸ್ ನಿಲ್ದಾಣ ನಿರ್ಮಾಣವಾಗಿದೆ. ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ದಂಪತಿಗಳ ವಿವಾಹ ವಾರ್ಷಿಕೋತ್ಸವದ ಸ್ವರ್ಣ ಮಹೋತ್ಸವದ ಅಂಗವಾಗಿ ಸುಮಾರು 40 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗಿದೆ.
ದಂಪತಿಯ ಮಕ್ಕಳು ಅಪ್ಪ- ಅಮ್ಮನ ಹೆಸರು ಅಜರಾಮರಗೊಳಿಸುವ ಮತ್ತು ಸಾರ್ವಜನಿಕರ ಉಪಯೋಗಕ್ಕೆ ಸಿಗುವ ರೀತಿ ಈ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಿ ಶಿರ್ವ ಗ್ರಾಮ ಪಂಚಾಯತ್ ಗೆ ವಿವಾಹ ವಾರ್ಷಿಕೋತ್ಸವದ ದಿನದಂದೇ ಉದ್ಘಾಟಿಸಿ ಹಸ್ತಾಂತರಿಸಿದರು.
ಬಸ್ ನಿಲ್ದಾಣವನ್ನು ಅಟ್ಟಿಂಜೆ ಶಂಭು ಶೆಟ್ಟಿ ಮತ್ತು ಹೇಮಲತಾ ದಂಪತಿಗಳು ಉದ್ಘಾಟಿಸಿದರು. ಈ ಸಂದರ್ಭ ಆಗಮ ವಿದ್ವಾಂಸ ಕುತ್ಯಾರು ಕೇಂಜ ಶ್ರೀಧರ ತಂತ್ರಿ, ಶಿರ್ವ ಚರ್ಚ್ ಧರ್ಮಗುರು ರೆ.ಫಾ.ಡೆನ್ನಿಸಾ ಡೇಸಾ, ಶಿರ್ವ ಸುನ್ನಿ ಮಸೀದಿ ಖತೀಬರಾದ ಸಿರಾಜುದ್ದೀನ್ ಝೈನಿ, ಪಂಚಾಯತ್ ಅಧ್ಯಕ್ಷ ಕೆ.ಆರ್. ಪಾಟ್ಕರ್, ದಂಪತಿಗಳ ಮಕ್ಕಳು, ಕುಟುಂಬಸ್ಥರು, ಪಂಚಾಯತ್ ಅಧಿಕಾರಿಗಳು, ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.
ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಸಿರಾಜುದ್ದೀನ್ ಝನಿ ಮಾತನಾಡಿ ಸ್ನೇಹ , ಸೌಹಾರ್ದತೆ ಮತ್ತು ಸಹಬಾಳ್ವೆಯೊಂದಿಗೆ ಜೀವನ ನಡೆಸುವ ಶಿರ್ವದಲ್ಲಿ ಜನಮಾನಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಯುವ ಕೆಲಸ ಶಂಭು ಶೆಟ್ಟಿ ದಂಪತಿ ಮತ್ತು ಮಕ್ಕಳಿಂದ ನಡೆದಿದೆ ಎಂದು ಹೇಳಿದರು.
ಇದನ್ನೂ ಓದಿ| ₹3.5ಲಕ್ಷದ ಚೆಕ್ ಹಿಂದಿರುಗಿಸಿದ ಬಸ್ ಕಂಡಕ್ಟರ್ !