Site icon Vistara News

Kundapra Kannada Habba: 23ಕ್ಕೆ ʻವಿಶ್ವಕುಂದಾಪ್ರ ಕನ್ನಡ ದಿನʼ: ಸಿಎಂ, ರಿಷಬ್‌ ಶೆಟ್ಟಿ ಉಪಸ್ಥಿತಿ, ಸಾಕ್ಷಿಯಾಗಲಿದೆ ಸಾಂಸ್ಕೃತಿಕ ಸಡಗರ!

siddaramaiah Rishab Shetty

ಬೆಂಗಳೂರು: ಕುಂದಾಪುರದಲ್ಲಿ ಎಷ್ಟು ಸೊಬಗಿದೆಯೋ ಅಷ್ಟೇ ಸೊಬಗಿನ ಸೊಗಡು ಆ ಭಾಷೆಯಲ್ಲೂ ಇದೆ. ಕುಂದಾಪುರ ಭಾಷೆ ಬದುಕನ್ನು ಪ್ರಚುರಪಡಿಸಲು ʻವಿಶ್ವಕುಂದಾಪ್ರ ಕನ್ನಡ ದಿನʼ (Kundapra Kannada Habba)ವನ್ನು ಪ್ರತಿ ವರ್ಷ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ʻಕುಂದಾಪ್ರ ಕನ್ನಡ ಹಬ್ಬʼ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಸಂಭ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ಐದನೇ ಬಾರಿ ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿರುವ “ಕುಂದಾಪ್ರ ಕನ್ನಡ ಹಬ್ಬ” ಜುಲೈ 23ರಂದು ಭಾನುವಾರ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅತ್ತಿಗುಪ್ಪೆಯಲ್ಲಿರುವ ಬಂಟರ ಭವನದಲ್ಲಿ ನಡೆಯಲಿದೆ.

ಗುರುರಾಜ್ ಗಂಟಿಹೊಳೆ ಸಮ್ಮುಖದಲ್ಲಿ ಕಾರ್ಯಕ್ರಮ

ಜುಲೈ 23ರಂದು ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ಕರಾವಳಿಯ ಜನಪದ ಕ್ರೀಡೆಯಾದ ಕಂಬಳ ಕ್ಷೇತ್ರದ ಸಾಧಕರಾದ ಶಾಂತರಾಮ ಶೆಟ್ಟಿ ಬಾರ್ಕೂರು ಇವರು ಉದ್ಘಾಟಿಸಲಿದ್ದಾರೆ. ಶಾಸಕರಾದ ಕಿರಣ್ ಕೊಡ್ಗಿ ಮತ್ತು ಗುರುರಾಜ್ ಗಂಟಿಹೊಳೆಯವರ ಸಮ್ಮುಖದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರಕಲಿದೆ.

ಇರಲಿದ್ದಾರೆ ರಿಷಬ್‌ ಶೆಟ್ಟಿ

ಸಂಜೆ 4.30ಕ್ಕೆ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿ ಇರಲಿದ್ದು , ಶಾಸಕರಾದ ಎಂ. ಕೃಷ್ಣಪ್ಪ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ ಹೆಗ್ಡೆಯವರು, ಬಂಟರ ಸಂಘ ಬೆಂಗಳೂರು ಇದರ ಅಧ್ಯಕ್ಷರಾದ ಎಂ.ಮುರಳೀಧರ ಹೆಗ್ಡೆಯವರ ಉಪಸ್ಥಿತಿ ಇರಲಿದೆ. ಇದೇ ಸಂದರ್ಭದಲ್ಲಿ ಕುಂದಾಪುರದ ಹಿರಿಮೆಯನ್ನು ಇನ್ನಷ್ಟು ವಿಸ್ತರಿಸಿದ ಸಾಧಕರಾದ ಪ್ರೊ. ಎ.ವಿ ನಾವಡ ಮತ್ತು ಸಂಗೀತ ನಿರ್ದೇಶಕರಾದ ರವಿ ಬಸ್ರೂರು ಇವರುಗಳು ಊರ ಗೌರವಕ್ಕೆ ಭಾಜನರಾಗಲಿದ್ದಾರೆ. ಖ್ಯಾತ ಚಿತ್ರ ನಟ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗು ಇನ್ನಿತರರು ಕಾರ್ಯಕ್ರಮದ ಮೆರಗು ಹೆಚ್ಚಿಸಲಿದ್ದಾರೆ.

ತಮ್ಮ ಮಾತೃಭಾಷೆಯಾದ ಕುಂದಗನ್ನಡದ ಮೇಲಿನ ಪ್ರೀತಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಹುಟ್ಟಿದ ಅಭಿಮಾನದ ಕಿಡಿಯೊಂದು ಇಂದು ವಿಶ್ವದಗಲ ಹಬ್ಬಿರುವ ಪರಿಯು ಭಾಷೆಯೊಂದರ ಅಪರಿಮಿತ ಸಾಧ್ಯತೆಯನ್ನು ಎತ್ತಿಹಿಡಿಯುತ್ತದೆ. ಸಮಾನಮನಸ್ಕ ಗೆಳೆಯರ ಸಾರಥ್ಯದಲ್ಲಿ ಆಯೋಜನೆಯಾಗುತ್ತಾ ಬಂದ ಈ ದಿನಾಚರಣೆಯು ಈ ಬಾರಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಬೆಂಗಳೂರು ಇದರ ಅಡಿಯಲ್ಲಿ ಆಯೋಜನೆಯಾಗಿದೆ. ಇದು ಕುಂದಾಪುರ ನೆಲಮೂಲದ ಭಾಷಾ ಸಂಪತ್ತು, ಆಚಾರ-ವಿಚಾರ, ಕಲೆ, ಕ್ರೀಡೆ, ವೈವಿಧ್ಯಮಯ ಆಹಾರ ಮುಂತಾದ ಕುಂದಾಪುರ ಜನಜೀವನ, ಸಾಂಸ್ಕೃತಿಕ ಹಿರಿಮೆಯನ್ನು ವಿಶ್ವಕ್ಕೆ ಸಾರುವ ಜತೆಗೆ ಇಲ್ಲಿ ನೆಲೆಸಿರುವ ಕುಂದಗನ್ನಡಿಗರ ಅಪರೂಪದ ಸಮ್ಮಿಲನಕ್ಕೆ ವೇದಿಕೆ ಕಲ್ಪಿಸುವ ಉತ್ಸವವಾಗಿರುತ್ತದೆ.

ಇದನ್ನೂ ಓದಿ: Kundapura Kannada: ಬೆಂಗಳೂರಲ್ಲಿ ʻವಿಶ್ವ ಕುಂದಾಪುರ ಕನ್ನಡ ಹಬ್ಬʼ; ಶಾಸಕ ಗುರುರಾಜ್ ಗಂಟಿಹೊಳೆ ಭಾಗಿ!

Kundapra Kannada Habba

ಬೆಂಗಳೂರಿನಲ್ಲಿ ಲಕ್ಷಾಂತರ ಕುಂದಗನ್ನಡಿಗರಿದ್ದು ತಮ್ಮ ತಾಯಿಬೇರಿನ ಜತೆಗಿನ ಅನುಬಂಧವನ್ನು ಕಡಿದುಕೊಳ್ಳದೆ ಜತನದಿಂದ ಕಾಪಿಟ್ಟುಕೊಂಡಿದ್ದಾರೆ. ಇವರೆಲ್ಲರನ್ನೂ ಒಂದೇ ಸೂರಿನಡಿ ನೋಡುವ, ಅಪರೂಪದ ಕಲಾವಿದರಿಗೆ ವೇದಿಕೆ ಕೊಡುವ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಗಳನ್ನು ಮೆಲುಕು ಹಾಕುವ ಹಾಗು ಸಂಸ್ಕೃತಿ ವಿನಿಮಯದಂತಹ ಸದುದ್ದೇಶವನ್ನು ಕುಂದಾಪ್ರಕನ್ನಡ ಹಬ್ಬವು ಹೊಂದಿದೆ. ಈ ಸಂಭ್ರಮದ ಹಾದಿಯಲ್ಲಿ ಕಳೆದ ವರ್ಷ ಮಂಗಳೂರು ವಿವಿಯಲ್ಲಿ ಅಧ್ಯಯನ ಪೀಠ ಆರಂಭಗೊಂಡಿದ್ದು ಸಮಸ್ತ ಕುಂದಗನ್ನಡಿಗರಿಗೆ ಹೆಮ್ಮೆಯ ವಿಷಯ.

ಏನೆಲ್ಲ ಇರಲಿದೆ?

ಕುಂದಾಪ್ರ ಕನ್ನಡ ಹಬ್ಬವು ಹಲವು ಸಾಂಸ್ಕೃತಿಕ ಸಡಗರಗಳಿಗೆ ವೇದಿಕೆಯಾಗಲಿದ್ದು ಮುಖ್ಯವಾಗಿ ರಾಘವೇಂದ್ರ ಜನ್ಸಾಲೆಯವರ ನೇತೃತ್ವದಲ್ಲಿ ಸಿದ್ಧಪ್ರಸಿದ್ಧ ಕಲಾವಿದರಿಂದ ಬೇಡರ ಕಣ್ಣಪ್ಪ ಎನ್ನುವ ಯಕ್ಷಗಾನ ಪ್ರಸಂಗ, ಕಲಾಕದಂಬ ಆರ್ಟ್ಸ್ ಅವರಿಂದ ವೀರ ಬರ್ಬರಿಕ ಯಕ್ಷಗಾನ ಪ್ರಸಂಗ, ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ಬಿಡುವನೇ ಬ್ರಹ್ಮಲಿಂಗ! ಎನ್ನುವ ನೃತ್ಯ ರೂಪಕ, ಕಿರುತೆರೆಯ ಖ್ಯಾತಿಯ ಶ್ರಾವ್ಯ ಮರವಂತೆ, ಸಮೃದ್ಧಿ ಕುಂದಾಪುರ, ಪ್ರೀತಂ ಅವರುಗಳು ಚಿತ್ರಪಟ ರಾಮಾಯಣ ಎಂಬ ಕಿರುನಾಟಕದ ಮೂಲಕ ರಂಜಿಸಲಿದ್ದಾರೆ. ಸಾಸ್ತಾನದ ಖ್ಯಾತ ನಾಟಕ ತಂಡ ಅಲ್ವಿನ್ ಅಂದ್ರಾದೆ ಮತ್ತು ಸಹಕಲಾವಿದರ ತಿಳಿ ಹಾಸ್ಯ ಪ್ರಹಸನ, ಟೀಂ ಕುಂದಾಪುರಿಯನ್ಸ್ ಅವರು ಮಿಂಚುಳ- ಇದ್ ಕತ್ಲಿ-ಬೆಳಗಿನ ಕಥಿ ಎಂಬ ವಿಶೇಷ ನಾಟಕ‌ವನ್ನು ನೆರೆದವರಿಗೆ ಕುಂದಾಪ್ರ ಕನ್ನಡ ಭಾಷೆಯ ಸೊಬಗನ್ನು ಮತ್ತು ಕನಸ್ಸಿನ ಕುಂದಾಪುರ ‌ಕುರಿತಾಗಿ ಪ್ರದರ್ಶಿಸಲಿದ್ದಾರೆ.

ಟೀಂ ಕುಂದಾಪುರಿಯನ್ಸ್ ಅವರ ಮಿಂಚುಳ ನಾಟಕ

ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಜುಲೈ 16ರಂದು ʻವಿಶ್ವ ಕುಂದಾಪುರ ಕನ್ನಡ ಹಬ್ಬʼದ ಸಂಭ್ರಮ ಮನೆಮಾಡಿತ್ತು. ಟೀಮ್ ಕುಂದಾಪುರಿಯನ್ಸ್ ವತಿಯಿಂದ ʻಮಾತಿನ್ ಹಬ್ಬʼ ಕಾರ್ಯಕ್ರಮ ನಡೆದಿದ್ದು, ಕುಂದಾಪುರಿಗರು ಎದುರಿಸುತ್ತಿರುವ ಸಮಸ್ಯೆ ಹಾಗೂ ಕನಸಿನ ಕುಂದಾಪುರದ ಬಗ್ಗೆ ಹಲವು ನಿರ್ಣಯ ಕೈಗೊಳ್ಳಲಾಗಿತ್ತು. ಇದೇ ತಂಡ ಮಿಂಚುಳ ನಾಟಕವನ್ನು ಪ್ರದರ್ಶಿಸುತ್ತಿದೆ. ಬೆಂಗಳೂರಿನಲ್ಲಿ ವಾಸಿಸುವ ಕುಂದಾಪುರ ಭಾಗದವರು ರಚಿಸಿಕೊಂಡಿರುವ ಟೀಮ್ ಕುಂದಾಪುರಿಯನ್ಸ್ ತಂಡದ ಮೂಲಕ‌ ಆಯೋಜಿಸಲಾಗಿತ್ತು. ಬದುಕು ಕಟ್ಟಿಕೊಳ್ಳುವ ಸಲುವಾಗಿ ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಯಾದ ಕುಂದಾಪುರ ಭಾಗದವರೇ ಸೇರಿ ಕಟ್ಟಿದ ತಂಡವೇ ಟೀಂ ಕುಂದಾಪುರಿಯನ್ಸ್. ಈ ತಂಡ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಸಲುವಾಗಿ ತಮ್ಮದೇ ಆದ ತಂಡವನ್ನು ರಚಿಸಿ ಕುಂದಾಪ್ರ ದಿನಕ್ಕೆ ಸಾಕಷ್ಟು ಕೊಡುಗೆಯನ್ನು ನೀಡುತ್ತಲೇ ಬರುತ್ತಿದೆ. ಈಗಾಗಲೇ ಹತ್ತು-ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಹಾನಗರಿಯಲ್ಲಿ ಮನೆಮಾತಾದ ತಂಡ ಈ ನಾಟಕವನ್ನು ಪ್ರದರ್ಶಿಸಲಿದೆ.

ಇದನ್ನೂ ಓದಿ: Kundapura Election Results: ಕುಂದಾಪುರದಲ್ಲಿ ಹಾಲಾಡಿ ಶಿಷ್ಯ ಕಿರಣ್‌ ಕೊಡ್ಗಿ ಜಯಭೇರಿ

Kundapra Kannada Habba

ಇರಲಿವೆ ಮನರಂಜನೀಯ ಕಾರ್ಯಕ್ರಮಗಳು

ಹಿರಿಯರಾದ ರೇಖಾ ಬಿ.ಬನ್ನಾಡಿ, ಉಪೇಂದ್ರ ಶೆಟ್ಟಿ, ಕವಿ ಹೆಚ್.ಡುಂಡಿರಾಜ್ ಅವರ ಭಾಷೆಯ ಬಹು ಆಯಾಮದ ಬಗ್ಗೆ ಮಾತು- ನುಡಿಚಾವಡಿ, ಜನಪ್ರಿಯ ಗಾಯಕರನ್ನೊಳಗೊಂಡ ಸ್ವರ ಕುಂದಾಪುರ ತಂಡದ ಕಾಡುವ ಹಾಡುಗಳ ಕಲರವ, ಕುಂದಾಪ್ರ ಕನ್ನಡದ ಖ್ಯಾತ ವಾಗ್ಮಿ ಮನು ಹಂದಾಡಿಯವರ ಲಘು ದಾಟಿಯ ಬಿಗು ಭಾಷಣ ಹಾಗು ಇನ್ನಿತರ ಮನರಂಜನೀಯ ಕಾರ್ಯಕ್ರಮಗಳು ಈ ಬಾರಿಯ ಕುಂದಾಪ್ರ ಕನ್ನಡ ಹಬ್ಬವನ್ನು ಅವಿಸ್ಮರಣೀಯಗೊಳಿಸಲಿವೆ.

ಹಬ್ಬದ ಬಯಲಿನ ಕಲರವ

ಬಯಲಾಟ, ಕರಾವಳಿಯ ಅಪರೂಪದ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸಲಾಗಿದ್ದು ವಯಸ್ಕರಿಗಾಗಿ ಹಗ್ಗ ಜಗ್ಗಾಟ, ದಂಪತಿಗಳಿಗಾಗಿ ಪ್ರತ್ಯೇಕ ಕ್ರೀಡೆಗಳು, ಮಕ್ಕಳಿಗೆ ಹೂವಾಡಗಿತ್ತಿ, ಸೈಕಲ್ ಟೈರ್ ಓಟ, ಹಣೆಬೊಂಡ ಓಟ, ಗಿರ್ಗಿಟ್ಲಿ ಓಟ, ಚಿತ್ರಕಲೆ, ಮಹಿಳೆಯರಿಗೆ ಹಲಸಿನ ಕೊಟ್ಟೆ ಕಟ್ಟುವುದು, ಮಡ್ಲ್ ನೆಯ್ಯುವುದು ಇನ್ನಿತರ ಸ್ಪರ್ಧೆಗಳು ಹಬ್ಬದ ಬಯಲಿನ ಕಲರವವನ್ನು ಇಮ್ಮಡಿಸಲಿದೆ.

ಇದನ್ನೂ ಓದಿ: ಜುಲೈ 28ರಂದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ: ಭಾಷಿ ಅಲ್ಲ ಬದ್ಕ್‌!

Kundapra Kannada Habba

ಸವಿಯಿರಿ ಕುಂದಾಪ್ರ ಅಪರೂಪದ ಖಾದ್ಯಗಳು

ಕುಂದಾಪುರದ ನುರಿತ ಬಾಣಸಿಗರು ಸ್ಥಳದಲ್ಲೇ ತಯಾರಿಸುವ ಹಾಲುಬಾಯಿ, ಕೊಟ್ಟೆ ಕಡುಬು, ಗೋಲಿಬಜೆ, ಬನ್ಸ್, ಸುಕ್ಕಿನ್ ಉಂಡೆ, ಎಳ್ ಬಾಯ್ರ್, ಹೆಸ್ರು ಬಾಯ್ರ್ ನಂತಹ ವಿವಿಧ ಪಾನಕಗಳು, ಹಬ್ಬದ ವಿಶೇಷ ತರಕಾರಿ ಊಟ, ಇಡ್ಲಿ ಕುಂದಾಪ್ರ ಕೋಳಿ ಸುಕ್ಕ, ಬಿರಿಯಾನಿ, ಚಟ್ಲಿ ಸಾರು ಇನ್ನಿತರ ಅಪರೂಪದ ಖಾದ್ಯಗಳು ಕುಂದಾಪ್ರ ಕನ್ನಡ ಹಬ್ಬಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಲು ಮತ್ತಷ್ಟು ಆಕರ್ಷಣೆಯಾಗಲಿವೆ.

ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಪಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಗೆ ಕಳೆದ ಬಾರಿ ಇಪ್ಪತ್ತು ಸಾವಿರಕ್ಕೂ ಅಧಿಕ ಮಂದಿ ಆಗಮಿಸಿದ್ದರು, ಹಿಂದಿನ ಬಾರಿಯ ಯಶಸ್ಸು ಈ ಬಾರಿ ನಮ್ಮ ನಿರೀಕ್ಷೆಯನ್ನು ಮತ್ತಷ್ಟು ಹಿರಿದಾಗಿಸಿದೆ.

Exit mobile version