ಉಡುಪಿ: 2022ರ ಮಾರ್ಚ್‌ನಿಂದ ಈ ಭಾಗದಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಅಧಿಕವಾಗುತ್ತಿದ್ದು, ಜನವರಿಯಿಂದ ಇದುವರೆಗೆ ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ. ಅದರಲ್ಲಿ 120ಕ್ಕೂ ಹೆಚ್ಚು ಬೈಂದೂರು ತಾಲೂಕು ವ್ಯಾಪ್ತಿಯಲ್ಲಿಯೇ ಇವೆ.
ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದ ಪ್ರದೇಶಗಳಲ್ಲಿ ಸದ್ಯ ಸಮರೋಪಾದಿಯಾಗಿ ನಿವಾರಣಾ ಆರೋಗ್ಯ ಇಲಾಖೆಯ ಕಾರ್ಯ ನಡೆಯುತ್ತಿದೆ. ಡೆಂಗ್ಯೂ ಹೆಚ್ಚಾಗಿರುವ ಪ್ರದೇಶಗಳಿಗೆ ಆರೋಗ್ಯ ಇಲಾಖೆ ದಿನ ನಿತ್ಯ ಭೇಟಿ ನೀಡುವ ಮೂಲಕ ಡೆಂಗ್ಯೂ ಮಿತಿ ಮೀರದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಶಾಲಾ ಮಕ್ಕಳಿಗೆ ಡೆಂಗ್ಯೂ ಹರಡದಂತೆ ತಪ್ಪಿಸಲು ಸ್ಥಳೀಯ ಶಾಲೆಗಳಿಗೆ 10 ದಿನ ರಜೆಯನ್ನು ಕೂಡ ಜಿಲ್ಲಾಡಳಿತ ನೀಡಿದೆ.
ಡೆಂಗ್ಯೂ ಪೀಡಿತರಿಗಾಗಿ ಕುಂದಾಪುರ ಸಾರ್ವಜನಿಕ ಆಸ್ಪತ್ರೆಯಲ್ಲಿ 60 ಹಾಸಿಗೆಗಳ ವಿಶೇಷ ವಾರ್ಡ್ ಸಿದ್ಧಪಡಿಸಲಾಗಿದೆ. ಮುದೂರು ಮತ್ತು ಜಡ್ಕಲ್‌ನಲ್ಲಿ ನಿರಂತರ ನಿಗಾ ಇರಿಸಲು ಆರೋಗ್ಯಾಧಿಕಾರಿಗಳನ್ನು ಒಳಗೊಂಡ 13 ತಂಡಗಳನ್ನು ರಚಿಸಿದ್ದು, ಈ ತಂಡದ ಸದಸ್ಯರು ಪ್ರತಿದಿನ ಮನೆಮನೆಗೆ ತೆರಳಿ ಅರಿವು ಮೂಡಿಸುತ್ತಿದ್ದಾರೆ. ಈ ಎರಡೂ ಗ್ರಾಮಗಳ ಮನೆಗಳಿಗೆ ಉಚಿತವಾಗಿ ಸೊಳ್ಳೆ ಪರದೆ, ತಲಾ 3 ಬಾಟಲ್ ಡಿಎಂಪಿ ತೈಲ ವಿತರಿಸಲಾಗಿದೆ.
ಇದಲ್ಲದೇ ಇಲ್ಲಿನ ಡೆಂಗ್ಯೂ ಪೀಡಿತರನ್ನು ಆಸ್ಪತ್ರೆಗೆ ಸ್ಥಳಾಂತರಿಸಲು ತುರ್ತು ಅಗತ್ಯಕ್ಕಾಗಿ 2 ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗಿದ್ದು, ಗ್ರಾಮದಲ್ಲಿ ಪ್ರತಿನಿತ್ಯ ಫಾಗಿಂಗ್ ಮಾಡಲಾಗುತ್ತಿದೆ. ಬೀದಿ ನಾಟಕ, ಸಾಕ್ಷ್ಯಚಿತ್ರ ಪ್ರದರ್ಶನಗಳ ಮೂಲಕ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದು, ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಡೆಂಗ್ಯೂ ನಿಯಂತ್ರಣ ಕುರಿತು ಮಾಹಿತಿ ನೀಡಿ, ಪೋಷಕರ ಮೂಲಕ ಅನುಷ್ಠಾನ ಮಾಡುವ ಬಗ್ಗೆ ಕ್ರಮ ಕೈಗೊಳ್ಳಲಾಲಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಮತ್ತು ಚರ್ಚ್ ವಾರದ ಪ್ರಾರ್ಥನೆ ಸಮಯದಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ.
ಈಗಾಗಲೇ ಸ್ಥಳೀಯ ಶಾಸಕರು ಸೇರಿದಂತೆ ಎಲ್ಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗತ್ಯ ನಿಯಂತ್ರಣ ಕ್ರಮಗಳ ಪಾಲನೆ ಮತ್ತು ಪ್ರತೀ ದಿನ ಇಲ್ಲಿನ ಪರಿಸ್ಥಿತಿಯ ಬಗ್ಗೆ ವರದಿ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಜಿಲ್ಲಾಡಳಿತ ನೀಡಿರುವ ನಿರ್ದೇಶನಗಳನ್ನು ಅನುಷ್ಠಾನ ಮಾಡಲಾಗುತ್ತಿದೆ. ಆದರೂ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವಂತೆ ಬೈಂದೂರು ಮಾಜಿ ಶಾಸಕರು ಕೂಡ ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ ಕೊರೋನಾ ದಿಂದ ಕೊಂಚ ಚೇತರಿಸಿಕೊಂಡಿದ್ದ ಜನ ಡೆಂಗ್ಯೂ ನಿಂದ ಕಂಗಾಲಾಗಿದ್ದಾರೆ. ಅಗತ್ಯ ಮುನ್ನೆಚ್ಚರಿಕೆಯ ಹೊರತು ಡೆಂಗ್ಯೂ ವೇಗವಾಗಿ ಹರಡುವುದನ್ನು ತಗ್ಗಿಸುವಲ್ಲಿ ಆರೋಗ್ಯ ಇಲಾಖೆ ಹರಸಾಹಸ ಮಾಡುತ್ತಿದೆ. ಗ್ರಾಮಸ್ಥರ ಸಂಪೂರ್ಣ ನೆರವಿನ ಹೊರತು ಡೆಂಗ್ಯೂ ನಿರ್ಮೂಲನೆ ಅಸಾಧ್ಯ ಎಂದು ಅರಿತ ಆರೋಗ್ಯ ಇಲಾಖೆ ಜನರಿಗೆ ಮುನ್ನೆಚ್ಚರಿಕೆಯ ಪಾಠ ಮಾಡುತ್ತಿದೆ.
ಇದನ್ನೂ ಓದಿ| ಇಂದು ರಾಷ್ಟ್ರೀಯ ಡೆಂಗ್ಯೂ ದಿನ: ರಾಜಧಾನಿಯಲ್ಲಿ ಹೆಚ್ಚುತ್ತಿದೆ ಪ್ರಕರಣ