ಉಡುಪಿ: ಉಡುಪಿಯ (Udupi News ) ಬೈಂದೂರು ಕ್ಷೇತ್ರದ ಯಡಮೊಗೆಯಲ್ಲಿ ಹೊಸ ಪ್ರಯೋಗ ಮಾಡಲಾಗಿದೆ. ಮಳೆಗಾಲದಲ್ಲಿ (Karnataka Rain) ಕಿರು ಸೇತುವೆ ಇಲ್ಲದೆ ಕಂಗಾಲಾಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ತಮ್ಮ ಕ್ಷೇತ್ರದ ಜನರಿಗೆ ನೆರವು ನೀಡುವ ಉದ್ದೇಶಕ್ಕೆ ಕ್ರೌಡ್ ಫಂಡಿಂಗ್ ಮೂಲಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಸೇತುವೆ ನಿರ್ಮಿಸಿದ್ದಾರೆ. ಅದು ಕೂಡ ಹಳೆ ಲಾರಿಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಿಸಲಾಗಿದೆ.
ಕಳೆದ ಬಾರಿ ಸಮರ್ಪಕ ಕಿರು ಸೇತುವೆ ಇಲ್ಲದೆ ಶಾಲಾ ಬಾಲಕಿ ನೀರು ಪಾಲಾಗಿದ್ದಳು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಆಗುವ ಸಾವು- ನೋವು ತಪ್ಪಿಸಲು ಸಮೃದ್ಧ ಬೈಂದೂರು ಮತ್ತು ಅರುಣಾಚಲ ಟ್ರಸ್ಟ್ ಸಹಭಾಗಿತ್ವದಲ್ಲಿ ಸೇತುವೆ ನಿರ್ಮಿಸಲಾಗಿದೆ.
ಮಳೆಗಾಲದಲ್ಲಿ ಸುಮಾರು 30 ಮನೆಗಳಿಗೆ ಸಂಪರ್ಕವೇ ಇಲ್ಲದೇ ಕಂಗಲಾಗಿದ್ದರು. ಮೂರು ಲಾರಿಗಳ ಹಳೆಯ ಚಾಸ್ಸಿ ಬಳಸಿ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಡಿಮೆ ಖರ್ಚಿನಲ್ಲಿ ಲಾರಿಯ ಚಾಸ್ಸಿ, ಬೋರ್ ವೇಲ್ ಪೈಪ್, ಜಿಎ ಪೈಟ್, ಕಬ್ಬಿಣ ತಗಡು ಬಳಸಿ ಸೇತುವೆ ನಿರ್ಮಿಸಲಾಗಿದೆ. ಅಂದಾಜು 2 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಿರು ಸೇತುವೆ ನಿರ್ಮಿಸಲಾಗಿದೆ.
ಇದನ್ನೂ ಓದಿ: Self Harming : ಅನಾರೋಗ್ಯದಿಂದ ಬೇಸತ್ತು ಕ್ರಿಮಿನಾಶಕ ಸೇವಿಸಿ ದಂಪತಿ ಆತ್ಮಹತ್ಯೆ; ಸಾಲಗಾರರ ಕಾಟಕ್ಕೆ ಹೆದರಿ ವ್ಯಕ್ತಿ ನಾಪತ್ತೆ
ಮಹಾರಾಷ್ಟ್ರ- ಕರ್ನಾಟಕ ಸಂಪರ್ಕ ಸೇತುವೆ ಬಂದ್
ಮಹಾರಾಷ್ಟ್ರ- ಕರ್ನಾಟಕಕ್ಕೆ ಸಂಪರ್ಕವಾಗಿದ್ದ ಕುಡಚಿಯ ಬೃಹತ್ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಉಗಾರ್ ಸಂಪರ್ಕ ಸೇತುವೆಯು ಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿದೆ. ಕೃಷ್ಣಾ ನದಿಯ ಅಬ್ಬರಕ್ಕೆ ಸೇತುವೆ ಮೇಲೆ ನದಿ ನೀರು ಹರಿದಿದೆ. ಸೇತುವೆ ಮುಳುಗಡೆಯಾಗಿದ್ದರಿಂದ ಸಂಚಾರವನ್ನು ಬಂದ್ ಮಾಡಲಾಗಿದೆ. ಕುಡಚಿ ಠಾಣಾ ಪೊಲೀಸರಿಂದ ಸೇತುವೆಗೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಇತ್ತ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಳೋಳ ಗ್ರಾಮದಲ್ಲಿ ಕೃಷ್ಟೆಯ ಅಬ್ಬರಕ್ಕೆ ಮಂದಿರ ಜಲಾವೃತಗೊಂಡಿದೆ. ಅತ್ತ ಜಮಖಂಡಿ ಮೀರಜ್ ಸೇತುವೆ ಸಂಪೂರ್ಣ ಮುಳುಗಡೆಯಿಂದಾಗಿ ವಾಹನ ಸವಾರರು ಪರದಾಡಿದ್ದಾರೆ. ಕುಡಚಿ- ಉಗಾರ ಸೇತುವೆಯು ಜಲಾವೃತವಾಗಿದ್ದು, ಮಹಾರಾಷ್ಟ್ರ ರಾಜ್ಯ ಸಾಂಗ್ಲಿ ಬಾಗಲಕೋಟೆ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಮಾರ್ಗ ಕಡಿತವಾಗಿದೆ. ಸೇತುವೆ ಮೇಲೆ ಮೂರು ಅಡಿಯಷ್ಟು ನೀರು ನಿಂತು ಅವಾಂತರವೇ ಸೃಷ್ಟಿಯಾಗಿದೆ. ಇನ್ನೂ ಅಥಣಿಯಲ್ಲಿ ಜಮೀನುಗಳಿಗೆ ಕೃಷ್ಣಾ ನದಿ ನೀರು ನುಗ್ಗಿದೆ. ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ಬಳಿ ನೀರು ನುಗ್ಗಿ ಈಗಾಗಲೇ ಎರಡು ಸಾವಿರ ಹೆಕ್ಟರ್‌ಕ್ಕಿಂತಲೂ ಅಧಿಕ ಪ್ರದೇಶಕ್ಕೆ ಹಾನಿಯಾಗಿದೆ. ನದಿಗೆ ಇಳಿಯದಂತೆ ನದಿಪಾತ್ರದ ಜನರಿಗೆ ಜಿಲ್ಲಾಡಳಿತದಿಂದ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಅಡಿಕೆ ತೋಟ ನೀರುಪಾಲು
ಶಿವಮೊಗ್ಗದ ಹೊಸನಗರದ ಹೆದ್ದಾರಿಪುರ ಗ್ರಾ.ಪಂ.ವ್ಯಾಪ್ತಿಯ ವಡಾಹೊಸಳ್ಳಿ ಗ್ರಾಮದಲ್ಲಿ ಹಳ್ಳದ ದಂಡೆ ಒಡೆದು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಗ್ರಾಮದ ಕಮಲಾಕ್ಷ ಎಂಬುವರ ಕೃಷಿ ಜಮೀನು ಜಲಾವೃತಗೊಂಡಿದೆ. ಕಳೆದ ವಾರ ಸುರಿದ ಧಾರಾಕಾರ ಮಳೆಗೆ ಹಳ್ಳದ ನೀರು ಉಕ್ಕಿ ಹರಿದಿದೆ. ಪರಿಣಾಮ ಅಪಾರ ಪ್ರಮಾಣದ ನೀರು ತೋಟಕ್ಕೆ ನುಗ್ಗಿದೆ. ನೂರಾರು ಅಡಿಕೆ ಸಸಿಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ