Site icon Vistara News

ಉಡುಪಿಯಲ್ಲಿ ವಿತ್ತ ಸಚಿವರ ಟೆಂಪಲ್‌ ರನ್‌

ಉಡುಪಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಉಡುಪಿ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ 6 ಗಂಟೆಗೆ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ನಂತರ ಶ್ರೀಮಠದಲ್ಲಿ ಪರ್ಯಾಯ ಕೃಷ್ಣಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು.

ನಂತರ ಕೊಲ್ಲೂರಿಗೆ ತೆರಳಿದ ಅವರು ಕೊಲ್ಲೂರಿನ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ಅವರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಇತರ ಜನಪ್ರತಿನಿಧಿಗಳು ಇದ್ದರು. ಸಚಿವರ ಆಗಮನದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು. ಸಚಿವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಾರ್ಥನೆ ಮಾಡಿಕೊಂಡರು.

ಮಧ್ಯಾಹ್ನ 2.30ಕ್ಕೆ ಉಡುಪಿಯ ಕುಕ್ಕಿಕಟ್ಟೆ ಬಳಿಯ ಶ್ರೀಕೃಷ್ಣ ಬಾಲನಿಕೇತನದ ವಿಸ್ತರಣಾ ಘಟಕವನ್ನು ಉದ್ಘಾಟಿಸಿದರು. ರಾಜ್ಯ ಸಭಾ ಸದಸ್ಯರಾಗಿರುವ ನಿರ್ಮಲಾ ಸೀತಾರಾಮನ್‌ ಅವರ ಪ್ರದೇಶಾಭಿವೃದ್ಧಿ ನಿಧಿಯಡಿ ಈ ವಿಸ್ತರಣಾ ಬ್ಲಾಕ್ ನಿರ್ಮಿಸಲಾಗಿದೆ. ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರೂ ಜತೆಯಲ್ಲಿದ್ದರು.

ಸಂಜೆ 4 ಗಂಟೆಗೆ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮಣಿಪಾಲದ ಟ್ಯಾಪ್ಮಿಯ 36ನೇ ವಾರ್ಷಿಕ ಘಟಿಕೋತ್ಸವದಲ್ಲಿ ಸಚಿವೆ ಸೀತಾರಾಮನ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದ ನಂತರ ಅವರು ಬೆಂಗಳೂರಿಗೆ ತೆರಳಲಿದ್ದಾರೆ. ಭಾನುವಾರ ಬೆಂಗಳೂರಿನಲ್ಲಿ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರ ಕಾರ್ಯಾಲಯದ ಪ್ರಕಟಣೆಯು ತಿಳಿಸಿದೆ.

ಇದನ್ನೂ ಓದಿ| ಉಡುಪಿ ಮಾಜಿ ಶಾಸಕ ಪ್ರಮೋದ್‌ ಮಧ್ವರಾಜ್‌ ಕಾಂಗ್ರೆಸ್‌ಗೆ ರಾಜಿನಾಮೆ

ಕೊಲ್ಲೂರಿಗೇಗೆ ಭೇಟಿ?: ಕೊಲ್ಲೂರು ಮೂಕಾಂಬಿಕಾ ದೇವಿ ದೇವಾಲಯವು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ದೇವಿ ದೇವಾಲಯವಾಗಿದೆ. ಶ್ರೀ ಮೂಕಾಂಬಿಕೆಯ ದರ್ಶನ ಪಡೆಯುವಂತೆ ಸಚಿವೆ ಶೋಭಾ ಕರಂದ್ಲಾಜೆ ಈ ಹಿಂದೆಯೇ ಮನವಿ ಮಾಡಿದ್ದರು. ಆದರೆ ಇದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಸದ್ಯವೇ ರಾಜ್ಯಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಅವರು ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರೆಂದು ಹೇಳಲಾಗುತ್ತಿದೆ.

ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರೊಂದಿಗೆ ಸಚಿವರು

ದೇವಾಲಯಕ್ಕೆ ಭೇಟಿ ನೀಡಿದ ಸಚಿವೆ ನಿರ್ಮಲಾ ಸೀತಾರಾಮ್‌ ಅವರನ್ನು ಪೂರ್ಣ ಕೂಂಭದೊಂದಿಗೆ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಗೋವಿಂದ ಅಡಿಗ ಮತ್ತು ನರಸಿಂಹ ಅಡಿಗರ ಉಸ್ತುವಾರಿಯಲ್ಲಿ ವಿಶೇಷ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ದೇವಾಲಯಕ್ಕೆ ಸಿಂಗಾಪುರದ ಗೃಹ ಸಚಿವ ಕಾಶಿ ವಿಶ್ವನಾಥನ್ ಮುರುಗನ್ ಸಹ ಭೇಟಿ ನೀಡಿದ್ದು, ಅವರೂ ಈ ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದಾರೆ.

ರಾಜ್ಯ ಸಭೆಗೆ ರಾಜ್ಯದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಆಯ್ಕೆಯ ಕುರಿತು ಚರ್ಚಿಸಲು ಭಾನುವಾರ ಬಿಜೆಪಿಯ ಕೋರ್‌ ಕಮಿಟಿ ಸಭೆ ನಡೆಯುತ್ತಿರುವುದರಿಂದ ರಾಜ್ಯದಿಂದ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮ್‌ ಅವರ ಈ ಟೆಂಪಲ್‌ ರನ್‌ ಮಹತ್ವ ಪಡೆದಿದೆ.

ಇದನ್ನೂ ಓದಿ| ಉಡುಪಿಯಲ್ಲಿ ಗ್ರಾ.ಪಂ. ಪಿಡಿಒ ಅಮಾನತು; ಅಧಿಕಾರಿಗಳ ಸಂಘದ ವಿರೋಧ

Exit mobile version