ಆನೇಕಲ್: ಇಲ್ಲಿನ ಹುಸ್ಕೂರು ಗೇಟ್ ಸಮೀಪದಲ್ಲಿರುವ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯು (Ukg student Fail) ಯುಕೆಜಿಯಲ್ಲಿ ಓದುತ್ತಿದ್ದ ಮಗುವನ್ನು ಅನುತ್ತೀರ್ಣ ಮಾಡಿದೆ! ಒಂದು ವಿಷಯದಲ್ಲಿ ಮಗು ೪೦ ಅಂಕಗಳಲ್ಲಿ ಕೇವಲ ಐದು ಅಂಕ ಪಡೆದಿದೆ, ಹೀಗಾಗಿ ಆ ವಿಷಯದಲ್ಲಿ ಮಗು ಫೇಲ್ ಎಂದು ನಮೂದಿಸಲಾಗಿದೆ. ಈ ಘಟನೆ ಮತ್ತು ಇಂಥ ಅಂಕ ಆಧಾರಿತ ವ್ಯವಸ್ಥೆಗಳು ಮಕ್ಕಳ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳೂ ಸೇರಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿದೆ.
ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಬಿ.ನಂದಿನಿ ಎಂಬಾಕೆಯನ್ನು ಫೇಲ್ ಮಾಡಿದ್ದರ ವಿರುದ್ಧ ಪೋಷಕರು ಸಿಟ್ಟಿಗೆದ್ದು ಟ್ವೀಟ್ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದರೆ, ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೂ ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ʻʻಯುಕೆಜಿ ತರಗತಿಯಲ್ಲಿ ಓದುತ್ತಿರುವ ಈ ಎಳೆಯ ಮಗುವನ್ನು ಫೇಲ್ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ, ಹೃದಯವಂತೂ ಮೊದಲೇ ಇಲ್ಲ. ಆ ಮಗುವನ್ನು ಏನು ಮಾಡಲು ಹೊರಟಿದೆ ಈ ಮಹಾ ಸಂಸ್ಥೆ?ʼʼ ಎಂದು ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ಶಿಕ್ಷಣ ಇಲಾಖೆ ತಾಲೂಕಿನ ಪ್ರಮುಖರಿಗೆ ತಲುಪಿಸಿ ಈ ಶಾಲೆಯ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಿ ಪಾವನಾಗಲು ಬಯಸಿದ್ದೇನೆ ಎಂದು ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಇನ್ನು 1- ೯ನೇ ತರಗತಿವರೆಗೆ ಯಾವುದೇ ವಿದ್ಯಾರ್ಥಿಯನ್ನು ಫೇಲ್ ಮಾಡಬಾರದೆಂಬ ನಿಯಮ ಇದೆ. ಈ ನಿಯಮವನ್ನು ಶಾಲಾ ಆಡಳಿತ ಮಂಡಳಿ ಗಾಳಿಗೆ ತೂರಿದಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೀಪಹಳ್ಳಿ ಬಳಿಯಿರುವ ಶಾಲೆ ಸೆಂಟ್ ಜೊಸೇಪ್ ಚಾಮಿನಾಡ್ ಅಕಾಡೆಮಿಯಲ್ಲಿ 1 ರಿಂದ 8ನೇ ತರಗತಿಯ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಿದೆ.
ಪೋಷಕರಿಂದಲೂ ಸರಣಿ ಟ್ವೀಟ್
ʻʻ6 ವರ್ಷದ ಮಗುವನ್ನು ಫೇಲ್ ಎಂದು ಘೋಷಿಸುವುದು ಸರಿಯಲ್ಲ. ಇದು ಮಕ್ಕಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತದೆʼʼ ಎಂದು ಮಗುವಿನ ಪೋಷಕರಾ ಮನೋಜ್ ಬಾದಲ್ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಶಿಕ್ಷಣದ ನಿಯಮವನ್ನು ಗಾಳಿಗೆ ತೋರಿರುವ ಶಿಕ್ಷಣ ಸಂಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ.
ಪೋಷಕರ ಆರೋಪ ತಳ್ಳಿಹಾಕಿ ಕ್ಷಮೆ ಯಾಚಿಸಿದ ಶಾಲಾಡಾಳಿತ
ಈ ಸಂಬಂಧ ಸೆಂಟ್ ಜೋಸೆಫ್ ಚಾಮಿನೇಡ್ ಅಕಾಡೆಮಿಯು ಸ್ಪಷ್ಣನೆಯನ್ನು ನೀಡಿದೆ. ಪೋಷಕರು ಆರೋಪಿಸಿರುವಂತೆ ನಾವು ಯಾವ ವಿದ್ಯಾರ್ಥಿಯನ್ನು ಅನುತ್ತೀರ್ಣಗೊಳಿಸಿಲ್ಲ. ಶೈಕ್ಷಣಿಕ ವರ್ಷದ ಕೊನೆಯಲ್ಲಿರುವಾಗ ಉತ್ತೀರ್ಣರಾಗುವ ಅಥವಾ ಅನುತ್ತೀರ್ಣದ ಪ್ರಶ್ನೆಯೇ ಬರುವುದಿಲ್ಲ ಇಲ್ಲ. ಇದು ಡಿಸೆಂಬರ್ ತಿಂಗಳಲ್ಲಿ ನಡೆಸಿದ್ದ ಯೂನಿಟ್ ಟೆಸ್ಟ್ ಫಲಿತಾಂಶಕ್ಕೆ ಸಂಬಂಧಿಸಿದ್ದು ಎಂದು ತಿಳಿಸಿದೆ.
ಸಾಫ್ಟ್‌ವೇರ್ ಫಲಿತಾಂಶ
ಮಕ್ಕಳಿಗೆ ಫಲಿತಾಂಶವನ್ನು ನೀಡಲು ಶಾಲೆಯಲ್ಲಿ ಮೊಬೈಲ್ ಅಪ್ಲಿಕೇಶನ್‌ನನ್ನು ಬಳಸಲಾಗುತ್ತಿದೆ. ಈ ಸಾಫ್ಟ್‌ವೇರ್‌ನಲ್ಲಿ ಪಾಸ್ ಫೇಲ್ ಅನ್ನು ಸೆಟ್ ಮಾಡಲಾಗಿದ್ದು, ಒಂದು ವಿಷಯದಲ್ಲಿ 35%ಕ್ಕಿಂತ ಕಡಿಮೆ ಪಡೆದಿರುವುದರಿಂದ ಫೇಲ್ ಎಂದು ತೋರಿಸಿದೆ. ಯೂನಿಟ್ ಟೆಸ್ಟ್‌ನಲ್ಲಿ ನಂದಿನಿ ಕನಿಷ್ಠ ಅಂಕವನ್ನು ಪಡೆದಿದ್ದರಿಂದ ಫೇಲ್ ಎಂದು ತೋರಿಸಿದೆ.
ಈ ವಿಚಾರವನ್ನು ಮಗುವಿನ ಪೋಷಕರು ಗಮನಕ್ಕೆ ತಂದ ತಕ್ಷಣ ಶಾಲೆಯ ಸಾಫ್ಟ್‌ವೇರ್ ಕಂಪನಿಯನ್ನು ಸಂಪರ್ಕಿಸಿ ‘ಫೇಲ್’ ಪದವನ್ನು ಬದಲಾಯಿಸುವಂತೆ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನು ಪೋಷಕ ಶಿಕ್ಷಕರ ಸಭೆಗೆ ಬಂದಾಗ ಪಾಲಕರು ಶಾಲೆಯಿಂದ ಮಾರ್ಕ್ಸ್ ಕಾರ್ಡ್ ಪಡೆದುಕೊಂಡಿದ್ದಾರೆ. ಇದನ್ನೇ ಅಧಿಕೃತ ಎಂದು ಪರಿಗಣಿಸಬೇಕು ಮತ್ತು ಆ ಮಾರ್ಕ್ಸ್‌ಕಾರ್ಡ್‌ನಲ್ಲಿ ಅನುತ್ತೀರ್ಣ ಎಂದು ಉಲ್ಲೇಖಿಸಿಲ್ಲ. ಈ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಕಚೇರಿಗೆ ಬರಲು ಸಿದ್ಧರಿಲ್ಲ, ಆದರೆ ಈ ತಪ್ಪು ತಿಳುವಳಿಕೆಯನ್ನು ಸೃಷ್ಟಿಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ಶಾಲೆಯ ಪ್ರಿನ್ಸಿಪಾಲ್ ಸಾಜು ಚಿತ್ತಡಿಯಿಲ್ ತಿಳಿಸಿದ್ದಾರೆ.