ಕಾರವಾರ: ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ಮಾ.22ರಿಂದ 25ರವರೆಗೆ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಯಲ್ಲಾಪುರ ತಾಲೂಕಿನ (Uttara Kannada News) ಉಮ್ಮಚಗಿಯ ಶ್ರೀ ಶ್ರೀ ಮಾತಾ ಸಂಸ್ಕೃತ ಮಹಾಪಾಠ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ವಿವಿಧ ವಿಭಾಗಗಳಲ್ಲಿ ಮೂವರು ಪ್ರಥಮ ಸ್ಥಾನ ಹಾಗೂ ಇಬ್ಬರು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಾಕ್ಪ್ರತಿಯೋಗಿತಾ ಸ್ಪರ್ಧೆಯ ಸಾಹಿತ್ಯ ಭಾಷಣದಲ್ಲಿ ನಾಗರಾಜ ಭಟ್ಟ ಪ್ರಥಮ, ಜ್ಯೋತಿಷ್ಯ ಶಲಾಕಾ ಸ್ಪರ್ಧೆಯಲ್ಲಿ ಗಣೇಶ ಪ್ರಸಾದ ಭಟ್ಟ ಪ್ರಥಮ, ಜ್ಯೋತಿಷ್ಯ ಭಾಷಣ ಸ್ಪರ್ಧೆಯಲ್ಲಿ ವಿನಾಯಕ ಭಟ್ಟ ದ್ವಿತೀಯ, ಸುಭಾಷಿತ ಕಂಠಪಾಠ ಸ್ಪರ್ಧೆಯಲ್ಲಿ ಸುಮಂತ್ ಜೋಶಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಇದೇ ಶಾಲೆಯಲ್ಲಿ ಅಧ್ಯಯನ ಮಾಡಿದ ಪಿಎಚ್‌ಡಿ ವಿದ್ಯಾರ್ಥಿ ಕುಮಾರ ಹೆಗಡೆ ಅಕ್ಷರಶ್ಲೋಕಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಒಟ್ಟು 14 ಚಿನ್ನದ ಪದಕ ಪಡೆದು ಕರ್ನಾಟಕ ರಾಜ್ಯವು ಸತತ 41ನೇ ಬಾರಿ ವಿಜಯ ವೈಜಯಂತೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ | ತಾತಯ್ಯ ತತ್ವಾಮೃತಂ : ಶಿಷ್ಯನು ಸಿಗುವುದು ಗುರುವಿನ ಪರಮಭಾಗ್ಯ!
ವೇದಭಾಷ್ಯ ಭಾಷಣದಲ್ಲಿ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ
ಕಾಶಿಯ ಬನಾರಸ್ ಹಿಂದು ವಿಶ್ವವಿದ್ಯಾಲಯದಲ್ಲಿ ನಡೆದ 2022-23ನೇ ಸಾಲಿನ ರಾಷ್ಟ್ರಮಟ್ಟದ ವಾಕ್ಪ್ರತಿಯೋಗಿತಾ ಸ್ಪರ್ಧೆಯಲ್ಲಿ ಶ್ರೀ ರಾಜರಾಜೇಶ್ವರೀ ಸಂಸ್ಕೃತ ಮಹಾಪಾಠಶಾಲೆಯ ಕೃಷ್ಣ ಯಜುರ್ವೇದ ವಿದ್ಯಾರ್ಥಿಯಾದ ಮಹೇಶ ಭಟ್ಟ ಹಿತ್ಲಕಾರಗದ್ದೆ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಕ್ಕೆ ಮತ್ತು ಪಾಠಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಇವರು ವಿ.ಪ್ರಸಾದ ಜೋಶಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಯ ಸಾಧನೆಗೆ ಸ್ವರ್ಣವಲ್ಲೀ ಶ್ರೀಗಳು, ಶಾಲಾ ಆಡಳಿತ ಮಂಡಳಿ, ಪ್ರಾಚಾರ್ಯರು, ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರು ಸಂತಸ ವ್ಯಕ್ತಪಡಿಸಿ, ಅಭಿನಂದನೆ ಸಲ್ಲಿಸಿದ್ದಾರೆ.