| ಅಜಯ್ ಗಾಯತೊಂಡೆ
ಬೆಟ್ಟದ ಹೂವಾಗಿ ಅರಳಿ. ಎರಡು ನಕ್ಷತ್ರದಂತೆ ಮಿನುಗಿ ಕರುನಾಡಿಗೆ ಪ್ರೇಮದ ಕಾಣಿಕೆ ನೀಡಿ ವೃದ್ಧ ಅನಾಥ ಬಡವರಿಗೆಲ್ಲ ಪರಮಾತ್ಮನಾಗಿ. ತಾನೇ ಉರಿದು ಮನೆಗೆ ಬೆಳಕು ನೀಡಿದ ದೀಪವಿಂದು ನಂದಾದೀಪವಾಗಿ, ಮಿನುಗಿ ಮರೆಯಾಯಿತು.. ಆದರೇ ಕಾಂತಿ ಎಂದಿಗೂ ಕುಂದಿಲ್ಲ; ಕುಂದುವುದೂ ಇಲ್ಲ. ಅಭಿಮಾನಿಗಳ ನೆಚ್ಚಿನ ‘ಅಪ್ಪು’, ಚಂದನವನದ ಪವರ್ ಸ್ಟಾರ್ ಅಗಲಿ ವರ್ಷ ಉರುಳಿದೆ. ಆದರೆ, ಅವರ ನೆನಪು ಇನ್ನೂ ಹಚ್ಚಹಸಿರು. ‘ಪವರ್ ಸ್ಟಾರ್’ ಎಂಬ ಬಿರುದು ಇದ್ದರೂ ಅಭಿಮಾನಿಗಳ ನಡುವೆ ಈ ಪಟ್ಟವನ್ನು ಪಕ್ಕಕ್ಕಿಟ್ಟು ಎಲ್ಲರಲ್ಲೂ ಒಂದಾಗಿ ‘ನಾನೂ ನಿಮ್ಮಲ್ಲೊಬ್ಬ’ ಎಂಬಂತಿದ್ದವರು. ಇಂದು ಅವರು ನಟನಾಗಿ ಅಷ್ಟೇ ಉಳಿದಿಲ್ಲ. ಕ್ಷಣಕ್ಷಣವೂ ಅವರನ್ನು ಜೀವಂತವಾಗಿರಿಸುವ ಹೆಜ್ಜೆಗಳನ್ನು ಅವರ ಅಭಿಮಾನಿಗಳು ಇಟ್ಟಿದ್ದಾರೆ. ಕೆಲವರು ‘ಅಪ್ಪು’ ಅಭಿಮಾನಿಯಾದರೇ ಇನ್ನೂ ಕೆಲವರಿಗೆ ಅಪ್ಪುವೇ ಆರಾಧ್ಯ ದೈವರಾದರು, ಅವರಿಟ್ಟಿದ್ದ ಹೆಜ್ಜೆ ಪುನೀತ ಹೆಜ್ಜೆ ಆಯಿತು, ಸಮಾಜಸೇವೆಗೆ ಮಾರ್ಗದರ್ಶನವಾಯಿತು, ಅದೆಷ್ಟೋ ಕಣ್ಣುಗಳು ಬೆಳಗಿದವು. ಸಮಾಧಿಯ ಸುತ್ತ ಅದೆಷ್ಟೋ ಜೀವಗಳು ಬದುಕು ಕಟ್ಟಿಕೊಂಡವು! ಹೀಗೊಮ್ಮೆ ಹಿಂತಿರುಗಿ ನೋಡಿದಾಗ ಈ ಅವಧಿಯಲ್ಲಿ ಭೌತಿಕವಾಗಿ ಪುನೀತ್ ಅವರನ್ನು ಕಾಣಲು ಅಸಾಧ್ಯವಾಗಿದ್ದರೂ, ಪ್ರತಿಯೊಬ್ಬರೂ ಪ್ರತಿ ಹೆಜ್ಜೆಯಲ್ಲೂ ‘ಪರಮಾತ್ಮ’ನನ್ನು ಕಂಡು ಅನುಭವಿಸಿದರು.
ಅರಗಿಸಿಕೊಳ್ಳದ ನೋವಿನ ನಡುವೆಯೂ ಅವರ ಅಭಿಮಾನಿ ಅಷ್ಟೇ ಅಲ್ಲದೇ ಸಾಮಾನ್ಯರೂ ಕೂಡ ಅವರ ಹೆಜ್ಜೆಯಿಡುತ್ತಿದ್ದಾರೆ. ಒಂದೆಡೇ ನೋಡಿದರೇ ಬಸ್ ಮೇಲಿನ ಜಾಹೀರಾತಿನಲ್ಲಿದ್ದ ಅಪ್ಪು ಅವರ ಭಾವಚಿತ್ರವನ್ನು ಸ್ವಚ್ಛಗೊಳಿಸಿ, ಮುತ್ತಿಕ್ಕಿದಳು; ಕೊಪ್ಪಳದ ಅಜ್ಜಿ. ಮತ್ತೊಂದೆಡೆ ತಂದೆಯ ಮಡಿಲಲ್ಲೇ ಮಲಗಿರುವ ರಾಜರತ್ನನ ಸಮಾಧಿಗೆ ನಮಿಸಲು ಇಂದಿಗೂ ಪ್ರತಿನಿತ್ಯ ಭೇಟಿ ನೀಡುವ ಸಾವಿರಾರು ಜನ. ಪುನೀತ್ ಅವರ ಮುಗ್ಧತೆ, ಸರಳತೆಗೆ ಪುರಾವೆಗಳು. ಹೀಗೆ ಅಭಿಮಾನಿಗಳ ಕಣ್ಣನಿಗಳು ನೂರು ಕತೆೆಗಳನ್ನು ಹೇಳುತ್ತಿವೆ. ಕನ್ನಡ ಚಿತ್ರರಂಗ, ಭಾಷೆ, ಸಂಸ್ಕೃತಿಗೆ ಪುನೀತ್ ರಾಜ್‌ಕುಮಾರ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಸರ್ಕಾರ ಅವರಿಗೆ (ಮರಣೋತ್ತರ) ಕರ್ನಾಟಕ ರತ್ನ ಪ್ರಶಸ್ತಿ ಕೂಡ ನೀಡಿತು.
ಇನ್ನು ಗಂಧದಗುಡಿ ಪ್ರಿ-ರಿಲೀಸ್ ನೆನಪು ಮಾಡಿಕೊಂಡರೇ ಲಕ್ಷಾನುಗಟ್ಟಲೇ ಅಭಿಮಾನಿಗಳು ಪುನೀತ ನಮನ – ಪುನೀತ ಪರ್ವಕ್ಕೆ ಸಾಕ್ಷಿಯಾಗಿದ್ದು ನಿಮಗೆಲ್ಲ ಗೊತ್ತೇ ಇದೆ. ಅಪ್ಪು ಎಕ್ಸ್‌ಪ್ರೆಸ್ ಆಂಬುಲೆನ್ಸ್: ನಟ ಪ್ರಕಾಶ್ ರಾಜ್ ಅವರು ತಮ್ಮ ಫೌಂಡೇಷನ್ ವತಿಯಿಂದ ಮೈಸೂರಿನಲ್ಲಿ ‘ಅಪ್ಪು ಎಕ್ಸ್‌ಪ್ರೆಸ್’ ಹೆಸರಿನಲ್ಲಿ ಆಂಬುಲೆನ್ಸ್ ಒಂದನ್ನು ಆಗಸ್ಟ್‌ನಲ್ಲಿ ಸೇವೆಗೆ ನೀಡಿದರು. ಈ ಕನಸನ್ನು ಪುನೀತಪರ್ವ ಕಾರ್ಯಕ್ರಮದಲ್ಲಿ ಬಿಚ್ಚಿಟ್ಟಾಗ, ತಮಿಳು ನಟ ಸೂರ್ಯ, ತೆಲುಗು ನಟ ಚಿರಂಜೀವಿ, ನಮ್ಮ ಚಿತ್ರರಂಗದ ಯಶ್, ಗೀತಾ ಶಿವರಾಜ್ ಕುಮಾರ್ ಎಲ್ಲರೂ ಇದಕ್ಕೆ ಕೈಜೋಡಿಸುವುದಾಗಿ ಹೇಳಿದರು.
ಇನ್ನೊಂದೆಡೆ ರಾಜ್ಯಾದ್ಯಂತ ಹಲವೆಡೆ ಪುನೀತ್ ಅವರ ಪುತ್ಥಳಿಗಳು ರಾರಾಜಿಸುತ್ತಿದೆ. ಅವರ ನೆಚ್ಚಿನ ತಾಣ ಹೊಸಪೇಟೆಯಲ್ಲೂ 7.4 ಅಡಿ ಎತ್ತರದ ಕಂಚಿನ ಪುತ್ಥಳಿ ನೆರವೇರಿತು. ಈಗ ಬಳ್ಳಾರಿ, ಬೆಳಗಾವಿ, ವಿಜಯನಗರ, ದೊಡ್ಡಬಳ್ಳಾಪುರ, ರಾಮನಗರ ಶಿವಮೊಗ್ಗ ಹೀಗೆ.. ರಾಜ್ಯಾದ್ಯಂತ ನಿಂತಿಲ್ಲ.
ಇಂದು ಪ್ರತೀ ಕನ್ನಡ ಚಲನಚಿತ್ರವೂ ಪುನೀತ್ ಭಾವಚಿತ್ರದೊಂದಿಗೇ ತೆರೆದುಕೊಳ್ಳುತ್ತಿವೆ. ಚಿತ್ರರಂಗದ ಕಾರ್ಯಕ್ರಮಗಳಲ್ಲಿ ಅಷ್ಟೇ ಏಕೆ ಶಾಲಾ ಮಕ್ಕಳ ಪಠ್ಯದಲ್ಲೂ ‘ಅಪ್ಪು’ವಿನ ಸ್ಮರಣೆಯೂ ಮುಂದುವರಿದಿದೆ. ಹೀಗಿರುವಾಗ, ಯಾವ ನೆಪವನ್ನಿಟ್ಟುಕೊಂಡು ನಾವು ಅಪ್ಪು ಅವರನ್ನು ನೆನಪಿಸಿ, ಸಂಭ್ರಮಿಸುವುದು?
ಇದನ್ನೂ ಓದಿ: Puneeth Rajkumar: ಅಶ್ವಿನಿ ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೊ ವೈರಲ್: ʻಫೀಲ್ ದಿ ಪವರ್ʼ ಅಂದ್ರು ಫ್ಯಾನ್ಸ್!
ಸ್ವರಚಿತ ನನ್ನ ಸಣ್ಣ ಕವಿತೆಯೊಂದಿಗೆ ಈ ಲೇಖನ ಕೊನೆಗೊಳ್ಳಿಸುವೆ; ಬದುಕಿನ ಪುಟಗಳಲ್ಲಿ.. ನಗುವಿನ ಪಟ ನೀವು. ನಗುವನ್ನೇ ಹೊತ್ತು ಅಳಿಸಿ ಹೋದಿರೆ! ಕನ್ನಡಿಗರ ಅಂತಃಕರಣದ ಅನರ್ಘ್ಯ ಯುವರತ್ನ ನೀವು. ಜೊತೆಗಿರದಿದ್ದರೂ ಎಂದಿಗೂ ಜೀವಂತ! ಸರಳತೆಯ ಸಾಕಾರಮೂರ್ತಿಯಾಗಿ, ದೊಡ್ಮನೆಯ ಕಣ್ಣಪ್ಪನಾಗಿ ಮುತ್ತಿನಂಥ ಕಣ್ಣುಗಳನ್ನು ನೀಡಿ ನಾಲ್ವರ ಬಾಳಿಗೆ ‘ಪುನೀತ’ರಾದಿರಿ. ಬಾಳೆಂಬ ಆಟದಿ ಚೆಂಡಂತೆ ಎಲ್ಲರೂ ತನ್ನಾಸೆಯಂತೆ ಆಡುತ್ತಾನೆ ಆ ದೇವರು! ಕನ್ನಡಿಗರ ಪಾಲಿನ ಯುವರತ್ನ ಮತ್ತೆ ಕರುನಾಡ ಗಂಧದಗುಡಿಯಲಿ ಹುಟ್ಟಿ ಬರಲೆಂದು ಆಶಿಸುತ್ತೇನೆ. ನಿಮ್ಮ ನಗು ಮುಖ, ಮಗು ಮನಸಿಗೆ ಶರಣು. ಜನ್ಮದಿನದ ಶುಭನಮನಗಳು.