Site icon Vistara News

Unauthorized schools: ಅನಧಿಕೃತ ಶಾಲೆಗಳ ವಿರುದ್ಧ ಶಿಕ್ಷಣ ಇಲಾಖೆ ಸಮರ; 45 ದಿನದೊಳಗೆ ಶಾಲೆ ಮುಚ್ಚಿಸಿ ವರದಿ ನೀಡಲು ಸೂಚನೆ

Residential schools should not be dens of harassment

#image_title

ಬೆಂಗಳೂರು: ಅನುಮತಿ ಇಲ್ಲದೆ ಶಾಲೆಗಳನ್ನು ತೆರೆದು, ಪೋಷಕರಿಂದ ಲಕ್ಷಾಂತರ ರೂಪಾಯಿ ಲೂಟಿ ಮಾಡಿ, ಮಕ್ಕಳ ಭವಿಷ್ಯದಲ್ಲಿ ಆಟವಾಡುತ್ತಿರುವ ಅನಧಿಕೃತ ಶಾಲೆಗಳ (Unauthorized schools) ವಿರುದ್ಧ ಇಲಾಖೆ ಕಠಿಣ ಕ್ರಮಕ್ಕೆ ಶಾಲಾ ಶಿಕ್ಷಣ ಇಲಾಖೆ ಮುಂದಾಗಿದೆ. ಈಗಷ್ಟೇ ಪರೀಕ್ಷೆ ಮುಗಿದು ಶಾಲೆಗಳು ಮುಕ್ತಾಯಗೊಂಡಿದೆ. 2023-24ನೇ ಸಾಲಿನ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದೆ. ಹೀಗಾಗಿ ಅನಧಿಕೃತ ಶಾಲೆಗಳು ಇದ್ದರೆ ಅದನ್ನೂ ಮುಚ್ಚಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆಯಾ ಉಪನಿರ್ದೇಶಕರಿಗೆ ಸೂಚನೆ ನೀಡಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿನ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕರ್ನಾಟಕ ಶಿಕ್ಷಣ ಕಾಯಿದೆ ಪ್ರಕಾರ ನೋಂದಣಿಯನ್ನು ಪಡೆಯದೆ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರುವುದು ಕಂಡು ಬಂದಿದೆ. ನೋಂದಣಿ ಪಡೆಯದೆ ಹೊಸ ಶಾಲೆ, ಹೆಚ್ಚುವರಿ ವಿಭಾಗ, ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವುದು. ಮಾತ್ರವಲ್ಲದೆ ಅನಧಿಕೃತ ಪಠ್ಯಕ್ರಮ, ರಾಜ್ಯದ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮ ಬೋಧಿಸುತ್ತಿರುವ ಶಾಲೆಗಳ ಪಟ್ಟಿ ಮಾಡುವಂತೆ ಜಿಲ್ಲಾ ಉಪನಿರ್ದೇಶಕರಿಗೆ ಇಲಾಖೆ ಸೂಚಿಸಿತ್ತು.

ಇದೀಗ ರಾಜ್ಯಾದ್ಯಂತ ಎಲ್ಲ ಉಪನಿರ್ದೇಶಕರು ಅನಧಿಕೃತ ಶಾಲೆಗಳ ಕುರಿತಂತೆ ಸಲ್ಲಿಸಿದ್ದ ಮಾಹಿತಿಯನ್ನು ಇಲಾಖೆ ಕ್ರೋಡೀಕರಿಸಿದ್ದು, ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಆ ಪ್ರಕಾರ ಶಾಲಾ ನೋಂದಣಿ, ಅನುಮತಿ ಪಡೆಯದೆ ನಡೆಯುತ್ತಿರುವ ಶಾಲೆಗಳನ್ನು ನಿಯಮಾನುಸಾರ ಮುಚ್ಚಿಸುವಂತೆ ಆದೇಶಿಸಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರವೇ ಶಾಲೆಯನ್ನು ಪ್ರಾರಂಭಿಸುವುದು ಕಡ್ಡಾಯವಾಗಿದೆ. ಹೀಗೆ ಅನುಮತಿ ಪಡೆಯದೆ ಇದ್ದರೆ ಕೂಡಲೇ ಮುಚ್ಚಿಸುವಂತೆ ಸೂಚಿಸಲಾಗಿದೆ.

ಮುಂದುವರಿದು, ನೋಂದಣಿ ಇಲ್ಲದೇ ಅನಧಿಕೃತವಾಗಿ ಉನ್ನತೀಕರಿಸಿದ ತರಗತಿಗಳನ್ನು ನಡೆಸುತ್ತಿರುವ ಶಾಲೆಗಳು ರಾಜ್ಯದಲ್ಲಿ ಇವೆ. ಪ್ರಾಥಮಿಕ ತರಗತಿಗಷ್ಟೇ ನೋಂದಣಿ ಪಡೆದ ಕೆಲ ಖಾಸಗಿ ಶಾಲೆಗಳು ಉನ್ನತೀಕರಿಸಿದ ತರಗತಿಗಳನ್ನು ಪ್ರಾರಂಭಿಸಲು ಸೆಕ್ಷನ್-‌32ರಲ್ಲಿ ಅವಕಾಶ ಕಲ್ಪಿಸಿದೆ. ಆದರೆ ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ನಡೆಯುತ್ತಿರುವ ಶಾಲೆಗಳು 45 ದಿನದೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ಕಾಲಾವಕಾಶ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ನೋಂದಾಯಿಸಿಕೊಳ್ಳದೆ ಇದ್ದರೆ ಶೈಕ್ಷಣಿಕ ವರ್ಷ ಆರಂಭಕ್ಕೂ ಮುನ್ನವೇ ಅನಧಿಕೃತ ಶಾಲೆಯೆಂದು ಘೋಷಿಸಿ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.

ಇನ್ನು ರಾಜ್ಯದಲ್ಲಿ ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸಲು ಅನುಮತಿ ಪಡೆದು ಅನಧಿಕೃತವಾಗಿ ಕೇಂದ್ರ ಪಠ್ಯಕ್ರಮಗಳಾದ ಸಿಬಿಎಸ್‌ಇ, ಐಸಿಎಸ್‌ಇ, ಐಬಿ ಪಠ್ಯವನ್ನು ಮಕ್ಕಳಿಗೆ ಬೋಧಿಸುತ್ತಿದೆ. ಹೀಗಾಗಿ ಈ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡಿ, ಅನುಮತಿ ಪಡೆದಿರುವ ಪಠ್ಯವನ್ನು ಮಾತ್ರ ಬೋಧಿಸುವಂತೆ ನಿರ್ದೇಶಕರು ಸೂಚಿಸುವಂತೆ ಶಾಲಾ ಶಿಕ್ಷಣ ಇಲಾಖೆ ಖಡಕ್‌ ಎಚ್ಚರಿಕೆ ನೀಡಿದೆ. ನಿಯಮ ಮೀರಿದ ಶಾಲೆಗಳ ಮಾನ್ಯತೆಯನ್ನು ಹಿಂಪಡೆಯುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Heart Attack: ಹೃದಯಾಘಾತದಿಂದ ಮೃತಪಟ್ಟ ಎಂದು ವೈದ್ಯರಿಂದ ಘೋಷಣೆ; ಮರಣೋತ್ತರ ಪರೀಕ್ಷೆಗೆ ಹೋಗುವಾಗ ಎದ್ದು ಕುಳಿತ ವ್ಯಕ್ತಿ!

ನೋಂದಣಿ ಪಡೆದ ಮಾಧ್ಯಮದಲ್ಲಿ ಬೋಧಿಸದೆ ಅನಧಿಕೃತವಾಗಿ ಬೇರೆ ಮಾಧ್ಯಮದಲ್ಲಿ ಬೋಧಿಸುತ್ತಿರುವ ಶಾಲೆಗಳಿಗೂ ಎಚ್ಚರಿಕೆಯನ್ನು ನೀಡಲಾಗಿದೆ. ಹೆಚ್ಚುವರಿ ವಿಭಾಗಗಳನ್ನು ಹೊಂದಿರುವಂತಹ ಶಾಲೆಗಳು, ಇಲಾಖೆಯ ಪೂರ್ವಾನುಮತಿ ಇಲ್ಲದೆ ಸ್ಥಳಾಂತರ ಅಥವಾ ಹಸ್ತಾಂತರಗೊಂಡಿರುವ ಶಾಲೆಗಳು ಹಾಗೂ ಕೇಂದ್ರ ಪಠ್ಯಕ್ರಮಕ್ಕೆ ಸಂಯೋಜನೆ ಹೊಂದಿದ ನಂತರ ಅದೇ ಕಟ್ಟಡದಲ್ಲಿ ಅನಧಿಕೃತವಾಗಿ ರಾಜ್ಯ ಪಠ್ಯಕ್ರಮ ಮುಂದುವರಿಸುತ್ತಿರುವುದನ್ನು ಅನಧಿಕೃತ ಶಾಲೆಗಳೆಂದು ಗುರುತಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲಾ ಉಪನಿರ್ದೇಶಕರು ಮೇ 25ರೊಳಗೆ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಂಡ ಬಗ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

Exit mobile version