Site icon Vistara News

Unauthorized Schools: ರಾಜಧಾನಿಯಲ್ಲಿವೆ ನೂರಕ್ಕೂ ಹೆಚ್ಚು ಅನಧಿಕೃತ ಶಾಲೆಗಳು; ಮೇಲೆ ತಳುಕು ಒಳಗೆಲ್ಲ ಹುಳುಕು

ಬೆಂಗಳೂರು: ನಿಮ್ಮ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುವ ಮುನ್ನ ಹುಷಾರಾಗಿರಿ. ಯಾಕೆಂದರೆ ಮೇಲೆ ತಳುಕು, ಒಳಗೆ ಹುಳುಕು ಎಂಬಂತೆ ಬೆಂಗಳೂರಿನಲ್ಲಿ ಅನಧಿಕೃತ ಶಾಲೆಗಳು (Unauthorized Schools) ತಲೆ ಎತ್ತಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿಯೇ ಸುಮಾರು 127 ಅನಧಿಕೃತ ಶಾಲೆಗಳಿವೆ.

ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯದೆಯೇ ಕೆಲ ಸಂಸ್ಥೆಗಳು ಶಾಲೆಗಳನ್ನು ನಡೆಸುತ್ತಿವೆ. ಸಿಬಿಎಸ್‌ಸಿ, ಐಸಿಎಸ್‌ಇ ಎಂದು ಬೋರ್ಡ್‌ ನೇತು ಹಾಕಿಕೊಂಡು ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ ಎಂದು ಕಳ್ಳಾಟ ಆಡುತ್ತಿವೆ. 5ನೇ ತರಗತಿ ಹಾಗೂ 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ನಡೆಸುತ್ತಿದ್ದಂತೆ ಒಂದೊಂದೇ ಖಾಸಗಿ ಶಾಲೆಗಳ ಹುಳುಕು ಹೊರಗೆ ಬರುತ್ತಿದೆ. ರಾಜ್ಯ ಪಠ್ಯಕ್ರಮ ಹೆಸರಲ್ಲಿ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆದು ಸಿಬಿಎಸ್‌ಸಿ, ಐಸಿಎಸ್‌ಇ ಪಠ್ಯವನ್ನು ಬೋಧಿಸುತ್ತಿದ್ದಾರೆ. ದಾಖಲಾತಿ ವೇಳೆ ಸಿಬಿಎಸ್‌ಸಿ, ಐಸಿಎಸ್‌ಇ ಶಾಲೆ ಎಂದು ನಂಬಿಸಿ ಪೋಷಕರಿಂದ ಲಕ್ಷ ಲಕ್ಷ ರೂಪಾಯಿ ಶುಲ್ಕವನ್ನು ಸುಲಿಗೆ ಮಾಡುತ್ತಿದ್ದಾರೆ.

ಫೇಕ್‌ ಶಾಲೆಗಳ ಬಣ್ಣ ಬಯಲು

ಅಸಲಿಗೆ ಈ ಅನಧಿಕೃತ ಶಾಲೆಗಳು ರಾಜ್ಯ ಪಠ್ಯಕ್ಕೆ ಅನುಮತಿ ಪಡೆದು ಸಿಬಿಎಸ್‌ಸಿ ಮಾನ್ಯತೆ ಇರುವ ಶಾಲೆಗಳಲ್ಲಿ ಪರೀಕ್ಷೆ ಬರೆಸುತ್ತಿದ್ದಾರೆ. ಆರ್ಕಿಡ್ ಶಾಲೆಯ ಕಳ್ಳಾಟದ ಬಳಿಕ ಒಂದೊಂದೆ ಫೇಕ್ ಶಾಲೆಗಳ ಬಣ್ಣ ಬಯಲಾಗುತ್ತಿವೆ. ಆರ್ಕಿಡ್ ಶಾಲೆಯ ಬಳಿಕ ಅನಧಿಕೃತ ಶಾಲೆಗಳ ಪರಿಶೀಲನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. ಬೆಂಗಳೂರಿನಲ್ಲಿನ ಅನಧಿಕೃತ ಶಾಲೆಗಳ ಮಾಹಿತಿ ಪಡೆದು ವರದಿ ನೀಡುವಂತೆ ಡಿಡಿಪಿಐ ಹಾಗೂ ಬಿಇಎಗಳಿಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

ಇದನ್ನೂ ಓದಿ: Amit Shah : ಫೊರೆನ್ಸಿಕ್‌ ವಿವಿ ಕಾರ್ಯಕ್ರಮದಲ್ಲಿ ಎಲ್‌.ಕೆ. ಆಡ್ವಾಣಿಯವರನ್ನು ಸ್ಮರಿಸಿದ ಗೃಹಸಚಿವ ಅಮಿತ್‌ ಶಾ

ಬೆಳ್ಳಂದೂರು ಪಣತೂರು ಆರ್ಕಿಡ್ ಶಾಲೆಯಲ್ಲೂ ದೋಖಾ

ಬೆಂಗಳೂರಿನಲ್ಲಿರುವ ಬಹುತೇಕ ಆರ್ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಪೋಷಕರಿಗೆ ವಂಚನೆ ಆಗಿದೆ. ನಾಗರಬಾವಿ, ಬಿಟಿಎಂ ಲೇಔಟ್ ಬಳಿಕ ಈಗ ಬೆಳ್ಳಂದೂರು ಪಣತೂರು ಆರ್ಕಿಡ್ ಶಾಲೆಯಲ್ಲೂ ಸಿಬಿಎಸ್‌ಸಿ ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆ ಎಂದು ಹೇಳಿ ದಾಖಲಾತಿ ಮಾಡಿಕೊಂಡಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

Exit mobile version