Site icon Vistara News

Union Budget 2023: ಉತ್ತಮ ಅಂಶಗಳುಳ್ಳ ದೂರದೃಷ್ಟಿ ಹೊಂದಿರುವ ಕೇಂದ್ರ ಬಜೆಟ್: ಜಿ.ಎನ್.ರಾವ್

Economist GN Rao shivamogga

#image_title

ಶಿವಮೊಗ್ಗ: “ಕೇಂದ್ರ ಸರ್ಕಾರ ದೂರದೃಷ್ಟಿ ಹೊಂದಿರುವ ಬಜೆಟ್ ಮಂಡಿಸಿದ್ದು, ದೇಶದ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬಜೆಟ್ (Union Budget 2023) ಮಂಡಿಸಲಾಗಿದೆ. ಜತೆಗೆ ಒಳ್ಳೆಯ ಅಂಶಗಳನ್ನು ಕೂಡ ಒಳಗೊಂಡಿದೆ” ಎಂದು ಆರ್ಥಿಕ ತಜ್ಞ ಜಿ.ಎನ್.ರಾವ್ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಬಜೆಟ್-2023 ಒಂದು ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, “ದೇಶದ ಜನರು ವಸ್ತುಗಳ ಬೆಲೆ ಏರಿಕೆ ಹಾಗೂ ಇಳಿಕೆ ಬಗ್ಗೆ ಮೊದಲು ಬಜೆಟ್‌ನಲ್ಲಿ ಗಮನ ಹರಿಸುತ್ತಾರೆ. ಯುವ ಜನತೆ ಉದ್ಯೋಗ ಸೃಷ್ಟಿ ಕುರಿತು ಅವಲೋಕಿಸುತ್ತಾರೆ” ಎಂದು ತಿಳಿಸಿದರು.

ಇದನ್ನೂ ಓದಿ: Turkey Earthquake: ಭೂಕಂಪದಲ್ಲಿ ಮೃತಪಟ್ಟ ಟರ್ಕಿಯ ಫುಟ್ಬಾಲ್​ ಆಟಗಾರ

“ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ ವಿವಿಧ ವಿಷಯಗಳಿಗೆ ಆದ್ಯತೆ ನೀಡಿದ್ದು, ಎಲ್ಲ ವಲಯಗಳಿಗೂ ಪ್ರಾಮುಖ್ಯತೆ ನೀಡಿರುವುದನ್ನು ಕಾಣಬಹುದಾಗಿದೆ. ಪ್ರತ್ಯೇಕವಾಗಿ ಗುರುತಿಸಿ ಗಮನಹರಿಸಲಾಗಿದೆ. ಎಸ್‌ಸಿ ಎಸ್‌ಟಿ, ಯುವ ಜನತೆ, ಮಹಿಳೆ, ರೈತ ವಲಯವನ್ನು ಗುರಿಯಾಗಿಸಿ ಬಜೆಟ್ ಮಂಡಿಸಲಾಗಿದೆ. ಕೃಷಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ” ಎಂದರು.

“ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್‌ನಲ್ಲಿ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ಸದೃಢ ಹಾದಿಯಲ್ಲಿ ಸಾಗುವ ಪ್ರಮುಖ ಅಂಶಗಳಿವೆ. ಈ ನಿಟ್ಟಿನಲ್ಲಿ ಮೂಲ ಸೌಕರ್ಯಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಹತ್ತು ಲಕ್ಷ ಕೋಟಿ ರೂಪಾಯಿಗೂ ಅಧಿಕ ಹಣ ಹೂಡಿಕೆಯು ಮೂಲ ಸೌಕರ್ಯ ಕ್ಷೇತ್ರದಲ್ಲಿ ಆಗುತ್ತಿದೆ. ಉದ್ಯೋಗ ಸೃಷ್ಟಿಗೆ ಹೂಡಿಕೆ ಸಹಕಾರಿಯಾಗಲಿದೆ” ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ದೇಶದಲ್ಲಿ ಅಧಿಕಾರ ಹಿಡಿದ ಪಕ್ಷಗಳು ಚುನಾವಣೆ ಘೋಷಣೆ ಮುನ್ನ ಪ್ರಣಾಳಿಕೆಯಲ್ಲಿ ಸೂಚಿಸಿರುವ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸುತ್ತವೆ. ಸಂಪನ್ಮೂಲ ಕ್ರೋಢೀಕರಣ, ಹಂಚಿಕೆ ಕುರಿತು ಬಜೆಟ್‌ನಲ್ಲಿ ವಿವರಿಸಲಾಗುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿ: JDS Politics: ಎಚ್‌.ಡಿ. ಕುಮಾರಸ್ವಾಮಿ ತಂತ್ರವನ್ನೇ ಬಳಸಿ ಹಾಸನ ಟಿಕೆಟ್‌ ಕೇಳಿದ ಎಚ್‌.ಡಿ. ರೇವಣ್ಣ: ಬಿಗ್‌ ಬ್ರದರ್‌ ಹೊಸ ವರಸೆ

ಲೆಕ್ಕ ಪರಿಶೋಧಕ ಶರತ್, ಲೆಕ್ಕ ಪರಿಶೋಧಕ ದೀಪಕ್ ಜೈನ್ ಅವರು 2023ರ ಬಜೆಟ್ ಕುರಿತು ವಿಶ್ಲೇಷಣೆ ಮಾಡಿದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿ ವಸಂತ್ ಹೋಬಳಿದಾರ್, ಪರಮೇಶ್ವರ್, ಜಿ.ವಿಜಯ್‌ ಕುಮಾರ್, ಶಂಕರಪ್ಪ, ಪ್ರದೀಪ್ ಎಲಿ, ಗಣೇಶ್ ಅಂಗಡಿ, ಬಿ.ಗೋಪಿನಾಥ್, ಹಾಲಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

Exit mobile version