Site icon Vistara News

HD Kumaraswamy: ವೈಜಾಗ್ ಸ್ಟೀಲ್ಸ್ ಕಾರ್ಖಾನೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭೇಟಿ

Union Minister HD Kumaraswamy visited Vizag Steels factory

ವಿಶಾಖಪಟ್ಟಣ: ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಗುರುವಾರ ಇಲ್ಲಿನ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಭೇಟಿ ನೀಡಿ, ಖುದ್ದು ಪರಿಶೀಲನೆ (HD Kumaraswamy) ನಡೆಸಿದರು.

ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ರಾಜ್ಯ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ, ವಿಶಾಖಪಟ್ಟಣದ ಸಂಸದ ಶ್ರೀಭರತ್, ಶಾಸಕರಾದ ಪಲ್ಲ ಶ್ರೀನಿವಾಸರಾವ್, ವಿಷ್ಣು ಕುಮಾರ್ ರಾಜು, ಉಕ್ಕು ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಜಯ್ ರಾಯ್, ವೈಜಾಗ್ ಸ್ಟೀಲ್ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ಅತುಲ್ ಭಟ್, ಭಾರತೀಯ ಉಕ್ಕು ಪ್ರಾಧಿಕಾರದ ನಿರ್ದೇಶಕ ಕಾಶಿ ವಿಶ್ವನಾಥ ರಾಜು ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸಚಿವ ಕುಮಾರಸ್ವಾಮಿ, ಕಾರ್ಖಾನೆಯ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯ ಬಗ್ಗೆ ಪರಿಶೀಲನೆ ನಡೆಸಿದರು.

ಕಾರ್ಖಾನೆಯ ಕಾರ್ಯ ಚಟುವಟಿಕೆ, ವಿಸ್ತಾರ, ವಿಭಾಗವಾರು ಮಾಹಿತಿಯನ್ನು ಕಂಪನಿಯ ಅಧ್ಯಕ್ಷ ಅತುಲ್ ಭಟ್, ಸಚಿವರಿಗೆ ನೀಡಿದರು. ಎಲ್ಲಾ ವಿಭಾಗಗಳ ಕ್ಷಮತೆ, ಸಿಬ್ಬಂದಿ ವಿವರ, ನಿರ್ವಹಣೆ ಹಾಗೂ ಫಲಿತಾಂಶದ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: Rohit Sharma: 5 ಕೋಟಿ ಬಹುಮಾನ ಮೊತ್ತವನ್ನು ತಂಡದ ಸಿಬ್ಬಂದಿಗೆ ನೀಡಲು ಮುಂದಾದ ರೋಹಿತ್​

ಬಳಿಕ ಕಬ್ಬಿಣ ಅದಿರು ಸಂಸ್ಕರಣೆ ಹಾಗೂ ಉಕ್ಕು ತಯಾರಿಕಾ ವಿಭಾಗಗಳಿಗೆ ಭೇಟಿ ನೀಡಿದ ಸಚಿವರು, ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿದರು. ಅನಂತರ ಎಲ್ಲಾ ವಿಭಾಗದಲ್ಲಿಯೂ ಕಾರ್ಮಿಕರ ಜತೆ ಸಂವಾದ ನಡೆಸಿದ ಕೇಂದ್ರ ಸಚಿವರು, ಅವರ ಸಮಸ್ಯೆಗಳನ್ನು ಕೇಳಿ ತಿಳಿದುಕೊಂಡರು.

ಸಮಗ್ರ ಮಾಹಿತಿ ಸಂಗ್ರಹ

ಅನಂತರ ಕೇಂದ್ರ ಸಚಿವರು ಕಾರ್ಖಾನೆಯ ಆಡಳಿತ ಕಚೇರಿಯಲ್ಲಿ ಕಾರ್ಖಾನೆಯ ಆಗುಹೋಗು, ವಹಿವಾಟು, ಲಾಭ-ನಷ್ಟ, ಉತ್ಪಾದನೆ, ಕಾರ್ಯನಿರ್ವಹಣೆಯ ಕ್ಷಮತೆ, ಅದಿರು ಪೂರೈಕೆ, ಕಾರ್ಮಿಕರ ಕುರಿತಾದ ಅಂಶಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಸಂಸದ ಶ್ರೀಭರತ್, ಮತ್ತಿತರೆ ಜನಪ್ರತಿನಿಧಿಗಳು ವೈಜಾಗ್ ಸ್ಟೀಲ್ ಕಂಪನಿಯನ್ನು ಉಳಿಸಲೇಬೇಕು. ಕೇಂದ್ರ ಸರ್ಕಾರವೇ ನಿರ್ವಹಣಾ ಬಂಡವಾಳ ನೀಡಲಿ ಅಥವಾ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ವಿಲೀನ ಮಾಡಲಿ ಎಂದು ತಿಳಿಸಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರೊಂದಿಗೆ ಸಭೆ

ಸಭೆಯ ನಂತರ ಕೇಂದ್ರ ಸಚಿವರು ವೈಜಾಗ್ ಸ್ಟೀಲ್ ಕಂಪನಿಯ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರ ಜತೆ ಪ್ರತ್ಯೇಕ ಸಭೆ ನಡೆಸಿದರು. ಸಭೆಯಲ್ಲಿ ಎಲ್ಲಾ ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು. ಯಾವುದೇ ಕಾರಣಕ್ಕೂ ಕಂಪನಿಯನ್ನು ಖಾಸಗಿಯವರಿಗೆ ಕೊಡಬಾರದು, ಸರ್ಕಾರವೇ ನಡೆಸಬೇಕು ಎಂದು ಕಾರ್ಮಿಕ ಮುಖಂಡರು ಸಭೆಯಲ್ಲಿ ಒತ್ತಾಯಿಸಿದರು.

ಇದನ್ನೂ ಓದಿ: How Does Plastic Affect Cancer: ಪ್ಲಾಸ್ಟಿಕ್‌‌‌ ಬಳಕೆಯಿಂದ ಕ್ಯಾನ್ಸರ್ ಬರದಂತೆ ತಡೆಯುವುದು ಹೇಗೆ?

ಕಾರ್ಖಾನೆಗೆ ಅತ್ಯಗತ್ಯ ಇರುವ ಕಬ್ಬಿಣ ಅದಿರು ಗಣಿಗಳನ್ನು ಹಂಚಿಕೆ ಮಾಡಿ ಎಂದು ಕಾರ್ಮಿಕ ಮುಖಂಡರು ಸಚಿವರನ್ನು ಕೋರಿದರು. ಮುಖಂಡರ ಎಲ್ಲಾ ಬೇಡಿಕೆಗಳನ್ನು ಸಚಿವರು ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಉಕ್ಕು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ವೈಜಾಗ್ ಸ್ಟೀಲ್ ಕಂಪನಿ ಬಗ್ಗೆ ಸರಣಿ ಸಭೆಗಳನ್ನು ನಡೆಸಿದ್ದೇನೆ. ಉನ್ನತ ಅಧಿಕಾರಿಗಳು, ಸಾಲ ನೀಡಿರುವ ಬ್ಯಾಂಕರುಗಳ ಜತೆ ಮಾತುಕತೆ ನಡೆಸಿದ್ದೇನೆ. ಸಚಿವನಾಗಿ ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳ ಒಳಗಾಗಿ ಕಾರ್ಖಾನೆಗೆ ಭೇಟಿ ನೀಡಿದ್ದೇನೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಕಾರ್ಯವೈಖರಿ ಎಂದು ಹೇಳಿದರು.

ಪ್ರಧಾನಿಗಳ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಆತ್ಮನಿರ್ಭರ್ ಭಾರತ್, ಮೇಕ್ ಇನ್ ಇಂಡಿಯಾ ಮೂಲಕ ವೈಜಾಗ್ ಸ್ಟೀಲ್ ಕಂಪನಿಯನ್ನು ಪುನಶ್ಚೇತನ ಮಾಡುವ ಬಗ್ಗೆ ಪ್ರಯತ್ನ ಮಾಡಲಾಗುವುದು. ವಾರ್ಷಿಕ 300 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಗುರಿಯನ್ನು ಪ್ರಧಾನಿಗಳು ನೀಡಿದ್ದಾರೆ. ಆ ಗುರಿ ಮುಟ್ಟುವ ಹಾದಿಯಲ್ಲಿ ವೈಜಾಗ್ ಸ್ಟೀಲ್ಸ್ ನಿರ್ಣಾಯಕ ಪಾತ್ರ ವಹಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Heart Health: ಹೃದಯದ ಆರೋಗ್ಯಕ್ಕಾಗಿ ಈ ಐದು ಅಡುಗೆ ಎಣ್ಣೆ ಸೂಕ್ತ; ಮಾಧುರಿ ದೀಕ್ಷಿತ್ ಪತಿಯ ಸಲಹೆ ಇದು

ನಾನು ಈಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಸ್ವಲ್ಪ ಕಾಲಾವಕಾಶ ಕೊಡಿ. ಕಳೆದ 20 ದಿನಗಳಲ್ಲಿ 16 ದಿನ ವೈಜಾಗ್ ಸ್ಟೀಲ್ಸ್‌ಗೇ ಸಮಯ ಕೊಟ್ಟು ಕೆಲಸ ಮಾಡಿದ್ದೇನೆ. ಪ್ರಧಾನಿಗಳ ಮಾರ್ಗದರ್ಶನದಲ್ಲಿ ಈ ಕಾರ್ಖಾನೆಗೆ ಕಾಯಕಲ್ಪ ನೀಡುವ ಕೆಲಸ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.

Exit mobile version