Site icon Vistara News

Forest Survey : ಬಗೆಹರಿಯದ ಗಡಿಕಲ್ಲು ವಿವಾದ; ರಾತ್ರಿ ಸರ್ವೆಗೆ ಬಂದಿದ್ದ ಅಧಿಕಾರಿಗಳನ್ನು ತಡರಾತ್ರಿವರೆಗೆ ಕೂರಿಸಿದ ಗ್ರಾಮಸ್ಥರು!

pushpagiri betta

ಮಡಿಕೇರಿ: ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಗಳ ಶ್ರೇಣಿ ಪ್ರದೇಶದ ಕೊತ್ನಳ್ಳಿ, ಕುಡಿಗಾಣ, ಕುಮಾರಳ್ಳಿ ಗ್ರಾಮಕ್ಕೆ ಸಂಬಂಧಿಸಿದ ಜನವಸತಿ ಹಾಗೂ ಕೃಷಿ ಪ್ರದೇಶಗಳಲ್ಲಿ ಪುಷ್ಪಗಿರಿ ವನ್ಯಜೀವಿ ವಿಭಾಗದಿಂದ ಮಾಡಲಾಗಿರುವ ಗಡಿ ಗುರುತು ಸಂಬಂಧ ಉದ್ಭವವಾಗಿರುವ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಇದು ಗ್ರಾಮಸ್ಥರು ಹಾಗೂ ಸರ್ಕಾರಿ ಇಲಾಖೆಯ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದು, ರಾತ್ರೋ ರಾತ್ರಿ ಅರಣ್ಯ ಸರ್ವೆ (Forest Survey) ಮಾಡಲು ಬಂದ ಅಧಿಕಾರಿಗಳನ್ನು ತಡರಾತ್ರಿವರೆಗೂ ತಡೆ ಹಿಡಿದಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬ್ರಿಟಿಷರ ಕಾಲದಿಂದಲೂ ಈ ಭಾಗದ ಊರಿನ ಜನ ಅರಣ್ಯದಂಚಿನಲ್ಲೇ ವಾಸವಿದ್ದು, ಪುಷ್ಪಗಿರಿ ವನ್ಯಧಾಮದ ಸಮೀಪವೇ ಜಮೀನುಗಳನ್ನು ಹೊಂದಿದ್ದಾರೆ. ಅಲ್ಲದೆ, ಅರಣ್ಯ ಇಲಾಖೆಯ ಗಡಿ ಕಲ್ಲು ರೈತರ ಜಮೀನ ಸಮೀಪವೇ ಇದೆ. ಆದರೆ, ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ಹೊಸದಾಗಿ ಗಡಿಕಲ್ಲು ಗುರುತು ಮಾಡಿದೆ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಇತ್ತೀಚೆಗಷ್ಟೇ ವನ್ಯಜೀವಿ ವಿಭಾಗದ ಅಧಿಕಾರಿಗಳು ಸರ್ವೆ ನಡೆಸಿ ಗ್ರಾಮಕ್ಕೆ ಸಮೀಪವೇ ಗಡಿ ಗುರುತು ಮಾಡಿದ್ದಾರೆ. ಕಲ್ಲುಗಳನ್ನು ನೆಟ್ಟಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಹಲವು ಸುತ್ತಿನ ಮಾತುಕತೆ ನಡೆದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ.

ಜ. 9ಕ್ಕೆ ಮತ್ತೊಂದು ಸಭೆ
ಕಳೆದ ಡಿ.26 ಹಾಗೂ ಜ.3ರಂದು ಸಮಸ್ಯೆ ಬಗೆಹರಿಸುವುದಾಗಿ ಅಧಿಕಾರಿಗಳು ಸಭೆ ಕರೆದಿದ್ದರು. ಆದರೆ, ಸಮಸ್ಯೆ ಇತ್ಯರ್ಥವಾಗದ ಹಿನ್ನೆಲೆ ಜನವರಿ 9ಕ್ಕೆ ಮತ್ತೆ ಸಭೆಯನ್ನು ನಿಗದಿ ಮಾಡಲಾಗಿದೆ. ಪದೇ ಪದೆ ಇದೇ ರೀತಿ ಮುಂದುವರಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದರು.

ಇದನ್ನೂ ಓದಿ | Panchamasali Reservation | ಬೊಮ್ಮಾಯಿಗೆ 24 ಗಂಟೆ ಗಡುವು ನೀಡಿದ ಯತ್ನಾಳ್‌, ಆಗಲ್ಲಾಂದ್ರೆ ಕ್ಷಮೆನಾದ್ರೂ ಕೇಳಿ

8 ಸಾವಿರ ಹೆಕ್ಟೇರ್ ಅರಣ್ಯ ಇದೀಗ 11 ಸಾವಿರ ಹೆಕ್ಟೇರ್
ಈ ಹಿಂದೆ 8 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದಿರುವುದು, ಈಗ 11 ಸಾವಿರ ಹೆಕ್ಟೇರ್‌ಗೆ ಏರಿಕೆಯಾಗಿದೆ. ಇಡೀ ಗ್ರಾಮಗಳನ್ನು ಅರಣ್ಯಕ್ಕೆ ಸೇರ್ಪಡೆಗೊಳಿಸುವ ಹುನ್ನಾರ ನಡೆಸಲಾಗಿದೆ. ಹೀಗಾದರೆ ನಾವುಗಳು ಬದುಕುವುದಾದರೂ ಹೇಗೆ? ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸಿಎಫ್ ಶ್ರೀನಿವಾಸ್ ನಾಯಕ್ ಪ್ರತಿಕ್ರಿಯೆ ನೀಡಿ, ಹಳೆಯ ಗಡಿಕಲ್ಲು ಇರುವ ಪ್ರದೇಶಕ್ಕೂ ಈಗಿನ ಕಲ್ಲುಗಳಿರುವ ಸ್ಥಳಕ್ಕೂ ಜಿಪಿಎಸ್‌ನಲ್ಲಿ ವ್ಯತ್ಯಾಸವಿದ್ದು, ಮೂಲ ಗಡಿ ಕಲ್ಲುಗಳನ್ನೇ ಅಭಯಾರಣ್ಯದ ಗಡಿ ಎಂದು ಗುರುತಿಸಿ ಕಲ್ಲುಗಳನ್ನು ಅಳವಡಿಸಲಾಗುವುದು. ಕುಮಾರಳ್ಳಿ ಗ್ರಾಮದ ಸ.ನಂ. 1/9ಪಿ99ರಲ್ಲಿ ಗೊಂದಲವಿದ್ದು, ಅಭಯಾರಣ್ಯಕ್ಕೆ ಹೆಚ್ಚಿನ ಪ್ರದೇಶ ದಾಖಲಾಗಿದೆ. ಈ ಬಗ್ಗೆ ತಹಸೀಲ್ದಾರ್‌ರಿಗೆ ಪತ್ರ ಬರೆದಿದ್ದು, ಅಭಯಾರಣ್ಯ ಪ್ರದೇಶವನ್ನು ಮ್ಯೂಟೇಷನ್ ಮಾಡಲು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜನವರಿ 3ರಂದು ಸರ್ವೆ ಕಂದಾಯ ಇಲಾಖೆ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಗಡಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಅದಾಗಿಲ್ಲ ಎಂದು ಜನತೆ ಆರೋಪಿಸಿದ್ದಾರೆ.

ತಹಸೀಲ್ದಾರ್‌ ಭರವಸೆ
ಮೂರು ದಿನದ ಹಿಂದೆ ರಾತ್ರಿ ವೇಳೆ ಸಿಸಿಎಫ್, ಡಿಎಫ್‌ಒ, ಎಸಿಎಫ್, ಆರ್‌ಎಫ್‌ಒ ಭಕ್ತಿ ಕ್ಯಾಂಪ್‌ನಿಂದ ಬೀದಳ್ಳಿ ಕ್ಯಾಂಪ್‌ಗೆ ಕಾಲ್ನಡಿಗೆಯಲ್ಲಿ ತೆರಳಿದ್ದು, ಜನರಿಗೆ ಅನುಮಾನ ಮೂಡಿ, ಅವರನ್ನು ಅಡ್ಡಗಟ್ಟಿದ್ದಾರೆ. ರಾತ್ರಿ ವೇಳೆ ಅಧಿಕಾರಿಗಳು ಬಂದು ಸರ್ವೆ ಮಾಡಲು ಕಾರಣವೇನು ಎಂದು ಗ್ರಾಮಸ್ಥರು ಪಟ್ಟುಹಿಡಿದರು. ನಮ್ಮನ್ನು ಇಲ್ಲಿಂದ ಒಕ್ಕಲೆಬ್ಬಿಸಲು ಬಂದಿದ್ದೀರಾ? ತಲೆತಲಾಂತರದಿಂದ ಬದುಕು ಕಟ್ಟಿಕೊಂಡಿರುವ ಮೂಲ ನಿವಾಸಿಗಳ ಬದುಕು ಮೂರಾಬಟ್ಟೆ ಮಾಡುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸುವಂತೆ ಒತ್ತಾಯ ಮಾಡಿದರು. ನಂತರ ತಹಸೀಲ್ದಾರ್ ಇದ್ದ ಭಕ್ತಿ ಕ್ಯಾಂಪ್‌ಗೆ ತೆರಳಿದ ಗ್ರಾಮಸ್ಥರು, ಕಂದಾಯ ಹಾಗೂ ಸರ್ವೆ ಇಲಾಖೆಯ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಹಿಂದೆ ನಡೆದ ಸಭೆಯಲ್ಲಿ ಗ್ರಾಮಸ್ಥರಿಗೆ ನೀಡಿದ ಒಂದೂ ಭರವಸೆಯನ್ನು ಈಡೇರಿಸಿಲ್ಲ ಎಂದು ಅಸಮಾಧಾನವನ್ನು ಹೊರಹಾಕಿದರು. ಕೊನೆಗೆ ತಹಸೀಲ್ದಾರ್ ನರಗುಂದ್ ಅವರು ಜ. 9ರಂದು ತಾಲೂಕು ಕಚೇರಿಯಲ್ಲಿ ಗ್ರಾಮಸ್ಥರನ್ನು ಒಳಗೊಂಡಂತೆ ಸಂಬಂಧಿಸಿದ ಎಲ್ಲ ಇಲಾಖಾಧಿಕಾರಿಗಳ ಸಭೆ ನಡೆಸಿ ಸಮಸ್ಯೆಯನ್ನು ಇತ್ಯರ್ಥಪಡಿಸಲಾಗುವುದು ಎಂದು ಬರವಣಿಗೆ
ಮೂಲಕ ಭರವಸೆ ನೀಡಿದ ನಂತರ ಅಧಿಕಾರಿಗಳನ್ನು ಬಿಟ್ಟುಕಳುಹಿಸಲಾಗಿದೆ.

ಇದನ್ನೂ ಓದಿ | Roopesh Shetty | ಬಿಗ್‌ ಬಾಸ್‌ ಖ್ಯಾತಿಯ ರೂಪೇಶ್ ಶೆಟ್ಟಿ ಸಿನಿಮಾ ಟ್ರೈಲರ್‌ ರಿಲೀಸ್‌!

Exit mobile version