ತುಮಕೂರು: ಮಾಂಡೌಸ್ ಚಂಡಮಾರುತದಿಂದಾಗಿ ರಾಜ್ಯಾದ್ಯಂತ ವರುಣ ಅಬ್ಬರಿಸಿದ್ದ. ಅಕಾಲಿಕ ಮಳೆಗೆ ಅನ್ನದಾತ ಕಂಗಾಲಾಗಿದ್ದು ಕಟಾವಿಗೆ ಬಂದಿದ್ದ ಬೆಳೆಯು ನೀರು ಪಾಲಾಗಿತ್ತು. ಪಾವಗಡ ತಾಲೂಕಿನ ಅರಳಿಕುಂಟೆ ಗ್ರಾಮದಲ್ಲಿ ರೈತರು ಬೆಳೆದಿದ್ದ ತೊಗರಿಬೆಳೆ ಕೈ ಸೇರುವ ಮುನ್ನವೇ ಮಳೆಗೆ ಸಂಪೂರ್ಣ ನಾಶವಾಗಿದೆ.
ಕಳೆದ ಕೆಲ ದಿನ ಹಿಂದೆ ಸುರಿದ ಮಳೆಗೆ ಸುಮಾರು 8 ಎಕರೆಯಲ್ಲಿ ಬೆಳೆದಿದ್ದ ತೊಗರಿ ಬೆಳೆ ನಾಶವಾಗಿದೆ. ಗ್ರಾಮದ ಶೇಷಾದ್ರಿ ಎಂಬ ರೈತ ಸುಮಾರು 8 ಎಕರೆ ಜಾಗದಲ್ಲಿ 1 ಲಕ್ಷ ಖರ್ಚು ಮಾಡಿ ತೊಗರಿ ಬೆಳೆ ಬೆಳೆದಿದ್ದರು. ಆದರೆ ಧಾರಾಕಾರವಾಗಿ ಸುರಿದ ಅಕಾಲಿಕ ಮಳೆಗೆ ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಕುಯ್ಲಿಗೂ ಮುನ್ನವೇ ಗಿಡದಲ್ಲಿ ತೊಗರಿಕಾಳು ಮೊಳಕೆ ಒಡೆದಿದ್ದು, ಸುಮಾರು 50 ಕ್ವಿಂಟಲ್ ನಷ್ಟು ಬೆಳೆ ನಾಶವಾಗಿದೆ.
ಸಾಲದ ಸುಳಿಯಲ್ಲಿ ರೈತ ಸಿಲುಕಿದ್ದು, ಕಳೆದ ವರ್ಷದ ಸುರಿದ ಮಳೆಗೂ ಇದೇ ರೀತಿ ನಷ್ಟ ಅನುಭವಿಸಿದ್ದಾಗಿ ರೈತ ಶೇಷಾದ್ರಿ ಅಳಲು ತೋಡಿಕೊಂಡಿದ್ದಾರೆ. ಮಳೆಯಿಂದಾದ ಬೆಳೆ ನಷ್ಟಕ್ಕೆ ಸರ್ಕಾರದಿಂದಲೂ ಪರಿಹಾರ ಬಂದಿಲ್ಲ. ಇತ್ತ ಬೆಳೆ ಇನ್ಶೂರೆನ್ಸ್ ಮಾಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ನೋವು ತೊಡಿಕೊಂಡಿದ್ದಾರೆ.
ಇದುವರೆಗೂ ಘಟನಾ ಸ್ಥಳಕ್ಕೆ ಕೃಷಿ ಇಲಾಖೆಯ ಯಾವ ಅಧಿಕಾರಿಗಳು ಭೇಟಿ ನೀಡಿಲ್ಲ. ಅಧಿಕಾರಿಗಳ ಬೇಜಜವ್ದಾರಿತನಕ್ಕೆ ಅಸಮಾಧಾನ ಹೊರಹಾಕಿದ್ದು, ಈ ಬಾರಿಯಾದರೂ ಬೆಳೆ ನಷ್ಟಕ್ಕೆ ಪರಿಹಾರ ಕೊಡುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ರೈತ ಶೇಷಾದ್ರಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ | Rain News | ವಿಜಯನಗರ ಜಿಲ್ಲೆಯಲ್ಲಿ ವಿವಿಧೆಡೆ ಮನೆಗಳಿಗೆ ಹಾನಿ, ಅಪಾರ ಪ್ರಮಾಣದ ಬೆಳೆ ನಷ್ಟ