ಚಾಮರಾಜನಗರ: ದಲಿತ ಮಹಿಳೆ ನೀರು ಕುಡಿದಿದ್ದರಿಂದ ಟ್ಯಾಂಕ್‌ನಲ್ಲಿದ್ದ ನೀರು ಖಾಲಿ ಮಾಡಿದ ಪ್ರಕರಣ(Untouchability) ನಡೆದಿದ್ದ ತಾಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ತಹಸೀಲ್ದಾರ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ನೀರಿನ ಟ್ಯಾಂಕ್‌ಗಳು ಸಾರ್ವಜನಿಕರ ಬಳಕೆಗಾಗಿ ಇವೆ ಎಂದು ಹೇಳಿ, ಗ್ರಾಮದ ತೊಂಬೆಗಳಲ್ಲಿ ದಲಿತ ಯುವಕರಿಗೆ ನೀರು ಕುಡಿಸಿ, ಯಾವುದೇ ರೀತಿಯ ಅಸ್ಪೃಶ್ಯತೆ ಆಚರಣೆ ಮಾಡದೆ ಸಹಬಾಳ್ವೆ ನಡೆಸಬೇಕು ಎಂದು ಗ್ರಾಮಸ್ಥರಿಗೆ ಸೂಚಿಸಿದರು.
ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮಹಿಳೆಯೊಬ್ಬರು ಕಿರು ನೀರು ಸರಬರಾಜು ಟ್ಯಾಂಕ್‌ನಲ್ಲಿ ನೀರು ಕುಡಿದರೆಂಬ ಕಾರಣಕ್ಕೆ ಟ್ಯಾಂಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ ಗೋಮೂತ್ರ ಹಾಕಿ ಶುದ್ಧಿಕರಿಸಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ತಾಲೂಕು ಆಡಳಿತದ ಅಧಿಕಾರಿಗಳು ಗ್ರಾಮಕ್ಕೆ ದೌಡಾಯಿಸಿದ್ದಾರೆ.
ತಹಸೀಲ್ದಾರ್ ಬಸವರಾಜು ಸೇರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಮೇಲ್ವರ್ಗದ ವ್ಯಕ್ತಿಯೊಬ್ಬನಿಂದ ಕೃತ್ಯ ನಡೆದಿದೆ ಎಂಬುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಪೊಲೀಸರ ತನಿಖೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ತಹಸೀಲ್ದಾರ್, ನೀರಿನ ತೊಂಬೆ ಯಾವುದೇ ನಿರ್ದಿಷ್ಟ ವರ್ಗದವರಿಗಾಗಿ ಇಲ್ಲ, ಬದಲಾಗಿ ಸಾರ್ವಜನಿಕರ ಉಪಯೋಗಕ್ಕಾಗಿ ಇದೆ. ಇನ್ನು ಮುಂದೆ ಇಂತಹ ತಪ್ಪು ಪುನರಾವರ್ತನೆಯಾಗಬಾರದು ಎಂದು ಎಚ್ಚರಿಕೆ ನೀಡಿ, ಗ್ರಾಮದ ದಲಿತ ಯುವಕರಿಗೆ ಗ್ರಾಮದಲ್ಲಿರುವ ಎಲ್ಲಾ ನೀರಿನ ಟ್ಯಾಂಕ್‌ಗಳಲ್ಲಿ ನೀರು ಕುಡಿಸಿದರು. ಬಳಿಕ ನೀರಿನ ಟ್ಯಾಂಕ್ ಮೇಲೆ ಇದು ಸಾರ್ವಜನಿಕರ ಉಪಯೋಗಕ್ಕಾಗಿ ಎಲ್ಲಾ ವರ್ಗದ ಜನರು ಉಪಯೋಗಿಸಬಹುದು ಎಂದು ಅಧಿಕಾರಿಗಳು ಬರೆಸಿದ್ದು, ಯಾರು ತಪ್ಪು ಮಾಡಿದ್ದಾರೆ ಅವರ ವಿರುದ್ಧ ನೀವು ದೂರು ನೀಡಿ, ನಾವು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Viral Video | ಉಚಿತ ಹೆಲ್ಮೆಟ್‌ಗಾಗಿ ಮುಗಿಬಿದ್ದ ಜನ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್