ಬಳ್ಳಾರಿ: ಸೋಲೇ ಗೆಲುವಿನ ಸೋಪಾನ ಎಂಬ ಗಾದೆ ಮಾತು ಅಕ್ಷರಶಃ ಸತ್ಯ ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಜಿಲ್ಲೆಯ ಯುಪಿಎಸ್‌ಸಿ ಅಭ್ಯರ್ಥಿ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಗೆಣಿಕೆ ಹಾಳ್ ಗ್ರಾಮದ ಕಡೇಮನೆ ಶಿವಕುಮಾರಪ್ಪ ಹಾಗೂ ಜಡಿಯಮ್ಮ ಅವರ ಪುತ್ರ ಶಾಂತಪ್ಪ ಕುರುಬರ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ (UPSC Results 2023) 644 ರ‍್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇನ್ನು ಇವರು ಕನ್ನಡದಲ್ಲೇ ಯುಪಿಎಸ್‌ಸಿ ಪರೀಕ್ಷೆ ಬರೆದು ಪಾಸ್ ಆಗಿರುವುದು ವಿಶೇಷವಾಗಿದೆ.
ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ನಾಲ್ಕು ವಿಷಯದಲ್ಲಿ ಫೇಲ್, ಬಿಎಸ್ಸಿಯಲ್ಲಿ ಫೇಲ್, ಕೆಎಎಸ್ ಪರೀಕ್ಷೆಯಲ್ಲಿ ಪ್ರಯತ್ನ ವಿಫಲ, ಯುಪಿಎಸ್ ಪರೀಕ್ಷೆಯಲ್ಲಿ ಆರಂಭದಲ್ಲಿ ವಿಫಲ. ಆದರೆ ನಿಶ್ಚಿಯಿಸಿದ ಗುರಿ ತಲುಪಲು ದೃಢ ನಿರ್ಧಾರ ಮತ್ತು ಪರಿಶ್ರಮದಿಂದ ಸಾಧ್ಯ ಎಂಬ ಸತ್ಯ ಅರಿತು, ಸೋಲನ್ನು ಸಾಧನೆಯ ಮೆಟ್ಟಿಲು ಮಾಡಿಕೊಂಡು ಶಾಂತಪ್ಪ ಕುರುಬರ ಸಕ್ಸಸ್ ಆಗಿದ್ದಾರೆ.
ಪಿಯುಸಿಯಲ್ಲಿ ಅನುತ್ತೀರ್ಣಗೊಂಡಿದ್ದ ಇವರು ಬಳಿಕ ಉತ್ತೀರ್ಣರಾಗಿ, ಬಳ್ಳಾರಿಯ ವೀರಶೈವ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. 2017ರಲ್ಲಿ ಪಿಎಸ್‌ಐ ಆಗಿ ನೇಮಕವಾಗುವ ಮೂಲಕ ಬೆಂಗಳೂರಿನಲ್ಲಿ ಸೇವೆ ಆರಂಭಿಸಿದ್ದು, ಪ್ರಸ್ತುತ ಬೆಂಗಳೂರಿನ ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾಮಾಜಿಕ ಕಳಕಳಿಯನ್ನು ಮೈಗೂಡಿಸಿಕೊಂಡಿರುವ ಇವರು ವಿದ್ಯಾಭ್ಯಾಸ ಮಾಡುವ ಬಡ ಮಕ್ಕಳಿಗೆ ವೈಯಕ್ತಿಕವಾಗಿ ನೆರವಾಗುವುದು, ಎಸ್ಸೆಸ್ಸೆಲ್ಸಿಯಲ್ಲಿ ರ‍್ಯಾಂಕ್ ಪಡೆದವರನ್ನು ಸನ್ಮಾನಿಸಿ ಪ್ರೋತ್ಸಾಹಿಸುವುದು, ಕೋವಿಡ್ ವೇಳೆ ಶಾಲೆಗಳಿಗೆ ತೆರಳಿ ಪಾಠ ಮಾಡುವುದು ಸೇರಿದಂತೆ ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸೈ ಎನಿಸಿಕೊಂಡಿದ್ದರು.
ಇದನ್ನೂ ಓದಿ | UPSC Result 2024: 12 ಪ್ರಯತ್ನದ ಹೊರತಾಗಿಯೂ ಸಿಗದ ಯಶಸ್ಸು; ಯುಪಿಎಸ್‌ಸಿ ಆಕಾಂಕ್ಷಿಯ ಪೋಸ್ಟ್ ವೈರಲ್
ಯುಪಿಎಸ್‌ಸಿ ಮಾಡಬೇಕೆಂಬ ಗುರಿಯನ್ನು ಬೆನ್ನತ್ತಿದ್ದ ಇವರು ಸತತ 7ನೇ ಬಾರಿ ಪರೀಕ್ಷೆ ಬರೆದಿದ್ದು, ಎರಡು ಬಾರಿ ಸಂದರ್ಶನ ಹಂತಕ್ಕೂ ತೆರಳಿದ್ದರೂ ಆಯ್ಕೆಯಾಗಿರಲಿಲ್ಲ. ನಂತರ ಪ್ರಯತ್ನವನ್ನು ಮುಂದುವರಿಸಿದ ಇವರು 8ನೇ ಬಾರಿಗೆ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್ ಪಡೆಯುವಲ್ಲಿ ಸಫಲರಾಗಿದ್ದಾರೆ. ಇವರು ದೆಹಲಿಯ ವಾಜಿರಾಮ್ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ತರಬೇತಿ ಪಡೆದಿದ್ದಾರೆ.
ಯುಪಿಎಸ್‌ಸಿ ಫಲಿತಾಂಶದ ಬಗ್ಗೆ ಪಿಎಸ್‌ಐ ಶಾಂತಪ್ಪ ಕುರುಬರ್ ಪ್ರತಿಕ್ರಿಯಿಸಿ, ಕನ್ನಡದಲ್ಲಿ ಪರೀಕ್ಷೆ ಬರೆಯುವುದು ತುಂಬಾ ಕಷ್ಟ. ಪಿಯುಸಿ ಅನುತ್ತೀರ್ಣವಾಗಿದ್ದೆ, ಆಗ ಊರಿನಲ್ಲಿ ಜನ ಅಡಿಕೊಂಡಿದ್ದರು. ಅಗ ತೀರ್ಮಾನ ಮಾಡಿ ಓದಲು ಮುಂದೆ ಬಂದೆ. ನಂತರ ಸಬ್ ಇನ್ ಸ್ಪೆಕ್ಟರ್ ಆದೆ. ಕೆಲಸ ಮಾಡಿಕೊಂಡು ಅಧ್ಯಯನ ಮಾಡಿದ್ದು, ಬೆಂಗಳೂರು ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಪಿಎಸ್‌ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
ಶಾಂತಪ್ಪ ಕುರುಬರ ಬಳ್ಳಾರಿಯಿಂದ ಬೆಂಗಳೂರಿಗೆ ವಲಸೆ ಹೋಗಿ ವಿದ್ಯಾಭ್ಯಾಸ ಮಾಡಿದ್ದಾರೆ. ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ಇವರು ಪಿಯುಸಿಯಲ್ಲಿ ಫೇಲ್ ಆಗಿದ್ದರೂ ಛಲ ಬಿಡದೇ ನಿರಂತರ ಅಧ್ಯಯನದೊಂದಿಗೆ ಪಿಎಸ್‌ಐ ಆಗಿ ನೇಮಕವಾಗಿದ್ದರು. ಇದೀಗ ಯುಪಿಎಸ್‌ಸಿಯಲ್ಲಿ 644 ರ‍್ಯಾಂಕ್ ಪಡೆದಿದ್ದಾರೆ.
ಕರ್ತವ್ಯದ ಜತೆಗೆ ಸಮಾಜಮುಖಿ ಕಾರ್ಯ
ಶಾಂತಪ್ಪ ಕುರುಬರ ಅವರು ಪೊಲೀಸ್ ಆಗಿ ಕೆಲಸ ನಿರ್ವಹಿಸುತ್ತಲೇ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದ್ದಾರೆ. ಬೆಂಗಳೂರಿನ ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಲ್ಲಿ ಸಾರ್ವಜನಿಕರಿಗಾಗಿ 10 ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಿದ್ದಾರೆ. ಇವರು ಮೊಬೈಲ್ ಟಾಯ್ಲೆಟ್ ವ್ಯವಸ್ಥೆ ಮಾಡಲು ಕಾರಣ ಅವರ ತಾಯಿ. ಈ ಮಾರ್ಗದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ತಾಯಿ ಶೌಚಾಲಯಕ್ಕೆ ಹೋಗಬೇಕು ಎಂದಿದ್ದರು. ಆಗ ಹತ್ತಿರದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯ ಇಲ್ಲದ ಕಾರಣ ಶೌಚಕ್ಕೆ ಹೋಗಲು ತೊಂದರೆಯಾಗಿತ್ತು. ಇದರಿಂದ ತಮ್ಮ ತಾಯಿಗಾದ ಕಷ್ಟ ಯಾರಿಗೂ ಆಗಬಾರದು ಎಂದು ಸಾರ್ವಜನಿಕರಿಗೆ ನೆರವಾಗಲು ಮೊಬೈಲ್ ಟಾಯ್ಲೆಟ್‌ಗಳ ವ್ಯವಸ್ಥೆ ಮಾಡಿದ್ದಾರೆ.