ಕಲಬುರಗಿ: ಜಿಲ್ಲೆಯ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿ (Ladle Mashak Dargah) ಶನಿವಾರ (ಫೆ. ೧೮) ಪೊಲೀಸ್ ಸರ್ಪಗಾವಲಿನಲ್ಲಿ ಉರುಸ್ ಹಾಗೂ ಶಿವಲಿಂಗ ಪೂಜೆ ನೆರವೇರಿತು. ಉರುಸ್ ಹಿನ್ನೆಲೆಯಲ್ಲಿ ದರ್ಗಾ ಕಮಿಟಿಯ 14 ಮಂದಿಗೆ ಪ್ರಾರ್ಥನೆಗೆ ಅವಕಾಶ ನೀಡಿದ್ದರೆ, ರಾಘವ ಚೈತನ್ಯ ಶಿವಲಿಂಗ ಪೂಜೆಗೆ 15 ಹಿಂದುಗಳಿಗೆ ಅವಕಾಶ ನೀಡಲಾಗಿತ್ತು.
ಶಿವರಾತ್ರಿ ದಿನದಂದು ದರ್ಗಾದಲ್ಲಿ ಶಿವಲಿಂಗ ಪೂಜೆಗೆ ವಕ್ಫ್ ಟ್ರಿಬ್ಯುನಲ್ ಕೋರ್ಟ್ ಅವಕಾಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ದರ್ಗಾ ಕಮಿಟಿ ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್‌ನಲ್ಲೂ ಶಿವಲಿಂಗ ಪೂಜೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ದರ್ಗಾದಲ್ಲಿ ಸರ್ಪಗಾವಲಿನ ನಡುವೆ ಪೂಜೆಗೆ ಅನುಮತಿ ನೀಡಲಾಗಿತ್ತು.
ಕಳೆದ ವರ್ಷ ಗಲಭೆ ನಡೆದಿದ್ದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಟ್ಟಣದಲ್ಲಿ ನಿಷೇಧಾಜ್ಞೆ ವಿಧಿಸಿ, ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಉರುಸ್ ಆಚರಣೆಗೆ ಅವಕಾಶ ನೀಡಲಾಗಿತ್ತು. 14 ಮುಸ್ಲಿಂ ಮುಖಂಡರು ಬೆಳಗ್ಗೆ 8ಕ್ಕೆ ದರ್ಗಾಗೆ ತೆರಳಿ ಪ್ರಾರ್ಥನೆ ಸಲ್ಲಿಸಿ ಉರುಸ್ ಆಚರಿಸಿ, ಮಧ್ಯಾಹ್ನ 11.45ಕ್ಕೆ ಹೊರಬಂದರು.
ಇದನ್ನೂ ಓದಿ | Tumor Operation | ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಮಹಿಳೆ; ಜೀವ ಉಳಿಸಿದ ಸರ್ಕಾರಿ ಆಸ್ಪತ್ರೆ ವೈದ್ಯರು
ಬಳಿಕ ಮಧ್ಯಾಹ್ನ 2 ರಿಂದ ಸಂಜೆ 6 ಗಂಟೆವರೆಗೆ ಶಿವಲಿಂಗ ಪೂಜೆಗೆ ಅವಕಾಶ ನೀಡಲಾಗಿತ್ತು. 15 ಹಿಂದುಗಳ ತಂಡಕ್ಕೆ ಮಾತ್ರ ಪೂಜೆಗೆ ಅವಕಾಶ ನೀಡಲಾಗಿತ್ತು. ಕಡಗಂಚಿ ಶ್ರೀಗಳು ಮತ್ತು ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಗಣಪತಿ ಪೂಜೆ, ಗಂಗಾ ಪೂಜೆ, ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಪೂಜೆ, ಮಹಾಮಂಗಳಾರತಿ ನಡೆಯಿತು. ಕೇಂದ್ರ ರಾಸಾಯನಿಕ ರಸಗೊಬ್ಬರ ಸಚಿವ ಭಗವಂತ್ ಖೊಬಾ, ಶಾಸಕ ಸುಭಾಷ್ ಗುತ್ತೇದಾರ್, ಮಾಲಿಕಯ್ಯ ಗುತ್ತೇದಾರ್ ಮತ್ತಿತರರು ಭಾಗಿಯಾಗಿದ್ದರು.
ಆಳಂದ ಪಟ್ಟಣದ ಹೊರವಲಯದ ಬೃಹತ್ ಮಂಟಪದಲ್ಲಿ ಶಿವಲಿಂಗ ಪೂಜೆ
ಲಾಡ್ಲೆ ಮಶಾಕ್ ದರ್ಗಾದಲ್ಲಿ ಶಿವಲಿಂಗ ಪೂಜೆಗೂ ಮುನ್ನಾ ಪಟ್ಟಣದ ಹೊರವಲಯದ ಬೃಹತ್ ಮಂಟಪದಲ್ಲಿ ಶಿವಲಿಂಗ ಪೂಜೆ ಮಾಡಲಾಯಿತು. ಸುಮಾರು 200 ಜನರು ಪೂಜೆಯಲ್ಲಿ ಭಾಗಿಯಾಗಿದ್ದರು. ಅಳಂದ ಶಾಸಕ ಸುಭಾಷ್ ಗುತ್ತೇದಾರ್ ಹಾಗೂ ಪುತ್ರ ಹರ್ಷ ಗುತ್ತೇದಾರ್ ಶಿವಲಿಂಗ ಪೂಜೆ ಸಲ್ಲಿಸಿದರು.
ದರ್ಗಾಕ್ಕೆ ತೆರಳುವ ಮುನ್ನ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಕಳೆದ ವರ್ಷ ಪೂಜೆಗೆ ಕಲಬುರಗಿ ಜಿಲ್ಲಾಡಳಿತ ಅವಕಾಶ ನೀಡಲಿಲ್ಲ. ಇಲ್ಲಿನ ಬಾಬರ್‌ನ ಸಂತತಿಗಳು, ಟಿಪ್ಪುವಿನ ಮೊಮ್ಮಕ್ಕಳು ಪೂಜೆಗೆ ಅವಕಾಶ ಕೊಡಲಿಲ್ಲ. ಪೂಜೆಗೆ ತೆರಳುತ್ತಿದ್ದ ನಮ್ಮನ್ನು ಅಂದು ಬಂಧಿಸಲಾಗಿತ್ತು. ಆಡಳಿತ ನಿರ್ಬಂಧ ಹೇರಿದರೆ ನಾವು ಅದನ್ನು ಸವಾಲಾಗಿ ತೆಗೆದುಕೊಳ್ಳುತ್ತೇವೆ. ಟಿಪ್ಪು ಸುಲ್ತಾನ್ ಮೊಮ್ಮಕ್ಕಳು, ಬಾಬರ್‌ನ ಮರಿಮೊಮ್ಮಕ್ಕಳು ಹೆದರಿಸುವುದಕ್ಕೆ ಬಂದಿದ್ದರು. ಆದರೆ ನಾವು ಯಾವುದಕ್ಕೂ ಹೆದರದೆ ಪೂಜೆ ಮಾಡಿ ಬಂದಿದ್ದೆವು ಎಂದರು.
2021 ರಲ್ಲಿ ರಾಘವ ಚೈತನ್ಯ ಶಿವಲಿಂಗದ ಮೇಲೆ ಟಿಪ್ಪುವಿನ ಮೊಮ್ಮಕ್ಕಳು ಮೂತ್ರ ವಿಸರ್ಜನೆ ಮಾಡಿದ್ದರು. ದರ್ಗಾದಲ್ಲಿನ ಶಿವಲಿಂಗವನ್ನು ಮುಚ್ಚಿಡಲು ಮುಂದಾಗಿದ್ದರು. ಆದರೆ, ಆಳಂದ ಹಿಂದು ಯುವಕರು ಹೋರಾಟ ಮಾಡಿ ಶಿವಲಿಂಗವನ್ನು ಸಂರಕ್ಷಿಸಿದ್ದರು. ಆಳಂದಕ್ಕೆ ಸಿದ್ದಲಿಂಗ ಬಂದರೆ ಬೆಂಕಿ ಕಡ್ಡಿ ತೆಗೆದುಕೊಂಡು ಬರುತ್ತಾನೆ ಎಂದು ಮುಸ್ಲಿಮರು ಹೇಳುತ್ತಾರೆ. ಆದರೆ ನಾನು ಟಿಪ್ಪು ಸುಲ್ತಾನ್‌ನ ಮೊಮ್ಮಕ್ಕಳ ಕಸ ಎಲ್ಲೆಲ್ಲಿ ಇರುತ್ತೊ ಅಲ್ಲಲ್ಲಿ ನಾನು ಬೆಂಕಿ ಹಚ್ಚುತ್ತೇನೆ. ಅದಕ್ಕಾಗಿ ನಾನು ಯಾವಾಗಲೂ ಕಡ್ಡಿ ತಗೊಂಡು ಓಡಾಡುತ್ತಿರುತ್ತೇನೆ ಎಂದು ಹೇಳಿದರು.
ಇದನ್ನೂ ಓದಿ | Maha Shivaratri 2023: ಧಾರವಾಡ ಸೋಮೇಶ್ವರನ ಗರ್ಭಗುಡಿ ಪ್ರವೇಶಕ್ಕೆ ಅವಕಾಶ; ಐತಿಹಾಸಿಕ ತ್ರಿಕುಟೇಶ್ವರನಿಗೆ ವಿಶೇಷ ಪೂಜೆ
ಮುಸ್ಲಿಮರಿಗೆ ಲಾಡ್ಲೆ ಮಶಾಕ್ ದರ್ಗಾ ಎಷ್ಟು ಪವಿತ್ರವೋ ಅಷ್ಟೇ ನಮಗೆ ಅಲ್ಲಿನ ಶಿವಲಿಂಗ ಪವಿತ್ರ. ದತ್ತಪೀಠ ಮಾದರಿಯಲ್ಲಿ ಶ್ರೀ ರಾಘವ ಚೈತನ್ಯ ಶಿವಲಿಂಗ ಅಭಿವೃದ್ಧಿ ಮಾಡಲಾಗುತ್ತದೆ. ಬಾಬಾಬುಡನ್‌ಗಿರಿ ಪಕ್ಕದಲ್ಲಿ ದರ್ಗಾ ಇದೆ ಎಂದು ಕೆಲ ರಾಜಕಾರಣಿಗಳು ಹೇಳಿದ್ದಾರೆ. ಇದರ ಪರಿಣಾಮ ಅಲ್ಲಿ ಅನೇಕ ಗೋರಿಗಳು ತಲೆ ಎತ್ತಿವೆ. ಯಾವ ಟಿಪ್ಪು ಮಕ್ಕಳು ಕೂಡ ನಮ್ಮ ಪೂಜೆ ನಿಲ್ಲಿಸಲು ಸಾಧ್ಯವಿಲ್ಲ. ಎಲ್ಲಿವರೆಗೆ ಕಲ್ಯಾಣ ಕರ್ನಾಟಕದಲ್ಲಿ ಗಂಡಸರು ಇರುತ್ತಾರೋ ಅಲ್ಲಿಯವರೆಗೆ ಈ ಟಿಪ್ಪುಗಳ ಆಟ ನಡೆಯುವುದಿಲ್ಲ, ಗಲಾಟೆ ಮಾಡುವವರು ಬಿನ್ ಲಾಡೆನ್, ಸದ್ದಾಂ ಹುಸೇನ್ ವಂಶಸ್ಥರು ಎಂದು ಕಿಡಿಕಾರಿದರು.